ಮಿಶ್ರ ಕೃಷಿಯಲ್ಲಿ ತಿಂಗಳಿಗೆ ಎರಡೂವರೆ ಲಕ್ಷ ದುಡಿದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಪದವೀಧರ.

ಕೆಲವೊಮ್ಮೆ ಅಕ್ಕ ಪಕ್ಕದವರನ್ನು ನೋಡಿಯೊ ಅಥವಾ ಬೇರೆಯವರ ಒತ್ತಾಯಕ್ಕೆ ಮಣಿದೊ ಇಷ್ಟವಿಲ್ಲದ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ನಂತರ ಅದನ್ನು ಅರ್ಧಕ್ಕೆ ಕೈ ಬಿಟ್ಟು ಹೊಸ ಕೆಲಸ ಹಿಡಿದು, ಜೀವನಕ್ಕೊಂದು ಬೇರೆ ದಾರಿ ಕಂಡುಕೊಳ್ಳುತ್ತೇವೆ. ಸ್ನಾತಕೋತ್ತರ ಪದವಿ ಪಡೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡ ನಂತರ ಅದನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಬೆರಳೆಣಿಕೆಯಲ್ಲಿ ಸಿಗುತ್ತಾರೆಯಷ್ಟೇ. ಇವರಲ್ಲಿ ತಿಳುವಳ್ಳಿ ಸಮೀಪದ ಹುಲಗಡ್ಡಿ ಗ್ರಾಮದ, ಚಂದ್ರಪ್ಪ ಪಂಚಪ್ಪ ತಲ್ಲೂರ್ ಅವರು ಒಬ್ಬರಾಗಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದ ಚಂದ್ರಪ್ಪ ತಲ್ಲೂರ್ ಅವರು ಅತಿಥಿ ಉಪನ್ಯಾಸಕರಾಗಿ ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ. ನಂತರ ಶಿಕ್ಷಕ ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಹುಲಗಡ್ಡಿ ಗ್ರಾಮದಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಕಾರ್ಯವನ್ನು ಮಾಡಿದ್ದಾರೆ. ಆರು ಎಕರೆ 20 ಗುಂಟೆ ಜಮೀನಿನಲ್ಲಿ ನಾಲ್ಕು ಎಕರೆ ಜಾಗವನ್ನು ಅಡಿಕೆ ತೋಟಕ್ಕಾಗಿ ಮೀಸಲಿಟ್ಟರು; ಉಳಿದ ಎರಡು ಎಕರೆ 20 ಗುಂಟೆ ಜಾಗದಲ್ಲಿ ಮಾವು, ಚಿಕ್ಕುಗಳಂತ ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದರು. ತಮ್ಮ ಜಮೀನಿನಲ್ಲಿ ಆರು ಕೊಳವೆ ಬಾವಿಗಳನ್ನು ಕೊರೆಸಿ, ನಾಲ್ಕು ಕೊಳವೆ ಬಾವಿಗಳಲ್ಲಿ ನೀರನ್ನು ಕಂಡರು. ಇವರು ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಶುಂಠಿ ಮತ್ತು ಮೆಣಸನ್ನು ಬೆಳೆದು ಯಶಸ್ವಿಯಾಗಿದ್ದಾರೆ.

‘ಅಡಿಕೆ ಗಿಡಗಳ ಮಧ್ಯೆ ಶುಂಠಿ, ಮೆಣಸು, ತರಕಾರಿಗಳನ್ನು ಬೆಳೆಸುತ್ತೇನೆ. ಬೇರೆ ಬೇರೆ ಜಾತಿಯ ಬೆಳಗಳನ್ನು ಬೆಳೆದಾಗ ಮಣ್ಣಿನ ಫಲವತ್ತತೆ ಹೆಚ್ಚಾಗಿ, ಖರ್ಚು ಕಡಿಮೆಯಾಗುತ್ತದೆ. ಪ್ರಾರಂಭದಲ್ಲಿ ಕಂಡ ರೋಗಕ್ಕೆ ಸಿಂಪಡಿಸಿದ ಔಷಧೀಯ ಖರ್ಚೊಂದನ್ನು ಬಿಟ್ಟು ಬೇರೇನು ವೆಚ್ಚ ಮಾಡಿಲ್ಲ. ಅಡಿಕೆಯನ್ನು ಬಿಟ್ಟು ಉಳಿದ ಬೆಳೆಗಳಿಂದಲೇ ನನಗೆ 25,000 ಲಾಭ ಬಂದಿದೆ. ತೋಟವನ್ನು ಮಾಡಿ ಆರು ವರ್ಷವಾಗಿದ್ದು, ನೀರಿನ ಪ್ರಮಾಣ ಕಡಿಮೆ ಇರುವ ಜಾಗದಲ್ಲಿ 80 ಮಾವಿನ ಗಿಡಗಳು, 50 ಚಿಕ್ಕ ಗಿಡಗಳು, ಅರವತ್ತು ತೆಂಗಿನ ಗಿಡಗಳು ಮತ್ತು ಸುತ್ತಲೂ 150 ತೇಗದ ಗಿಡಗಳಿವೆ. ಎರಡು ಹಸುಗಳನ್ನು ಸಾಕಿದ್ದೇನೆ. ಅವುಗಳಿಗೆ ಬೇಕಾದ ಹುಲ್ಲನ್ನು ಇದೇ ಜಾಗದಿಂದ ಬೆಳೆಯುತ್ತಿದ್ದೇನೆ’ ಎಂದು ಚಂದ್ರಪ್ಪ ತಲ್ಲೂರ್ ಹೇಳಿದ್ದಾರೆ.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿರುವ ಇವರು ಚಿಕ್ಕು, ಮಾವು, ಅಡಿಕೆ, ಶುಂಠಿ ಸೇರಿದಂತೆ ಸುಮಾರು ಮೂರರಿಂದ ನಾಲ್ಕು ಲಕ್ಷ ಲಾಭಗಳಿಸುವ ಸಾಧ್ಯತೆ ಇದೆ. ‘ಹವಾಮಾನದ ಏರುಪೇರು, ಬೆಳೆಗಳ ಬೆಲೆಕುಸಿತ, ರೋಗ ಮುಂತಾದ ಕಷ್ಟಗಳಿಗೆ ಒಳಗಾದ ರೈತನು ಮಿಶ್ರ ಕೃಷಿಯನ್ನು ರೂಢಿಸಿಕೊಂಡರೆ ಮತ್ತು ಸರ್ಕಾರದಿಂದ ಮಿಶ್ರ ಬೆಳೆಗಳಿಗೆ ಒಳ್ಳೆಯ ಮಾಹಿತಿಯೊಂದಿಗೆ, ಪ್ರೋತ್ಸಾಹ ದೊರೆತರೆ ನಷ್ಟವನ್ನು ಸರಿದೂಗಿಸಿ, ರೈತನು ನೆಮ್ಮದಿಯ ಜೀವನವನ್ನು ನಡೆಸಬಹುದು’ ಎಂದು ಚಂದ್ರಪ್ಪ ತಲ್ಲೂರ್ ಹೇಳುತ್ತಾರೆ.

Leave a Comment

error: Content is protected !!