ಜೀವ ಕೊಟ್ಟ ಅಪ್ಪನಿಗೆ, ಮರು ಜೀವನ ಕೊಟ್ಟ ಮಗಳು. ಉತ್ತರ ಕನ್ನಡದ ಮುದ್ದು ಮಗಳ ಮುಡಿಗೇರಿದ ಚೆನ್ನಮ್ಮ ಶೌರ್ಯ ಪ್ರಶಸ್ತಿ..!

ಮಕ್ಕಳ ದಿನಾಚರಣೆಯ ಅಂಗವಾಗಿ ತಮ್ಮ ಶಕ್ತಿ, ಯುಕ್ತಿಯನ್ನು ಬಳಸಿ ಧೈರ್ಯವಾಗಿ ಜೀವ ರಕ್ಷಿಸಿದ ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿರುವ ಜವಾಹರ ಬಾಲಭವನದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಗಿತ್ತು. ಹತ್ತು ಸಾವಿರ ರೂಪಾಯಿಗಳ ನಗದು ಹಣ, ಪ್ರಶಸ್ತಿ ಪತ್ರ, ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ರಾಜ್ಯಪಾಲರಾದ ಥಾವರ್ ಚಂದ್ ಅವರು ‘ಪ್ರತಿ ಮಗುವಿಗೂ ಎಲ್ಲಾ ಹಕ್ಕು ದೊರಕಿ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯು ಸಂಪೂರ್ಣ ನಿರ್ಮೂಲನೆ ಆಗಬೇಕು’ ಎಂದರು.

ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಹಾಲಪ್ಪ ಅವರು ‘ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಉತ್ತಮ ಶಿಕ್ಷಣ ನೀಡುವುದರ ಮೂಲಕ ಆರೋಗ್ಯಯುತವಾದ ಸಮಾಜ ಕಟ್ಟುವ ಆಶಯವನ್ನು ಹೊಂದಿದ್ದೇವೆ’ ಎಂದರು. ರಸ್ತೆಯ ಅವಘಡದಲ್ಲಿ ಸಿಲುಕಿಕೊಂಡ ತನ್ನ ತಂದೆಯನ್ನು ಸಾಹಸದಿಂದ ರಕ್ಷಿಸಿದ ಕೌಶಲ್ಯ ವೆಂಕಟರಮಣ ಸೇರಿದಂತೆ ಪ್ರಾರ್ಥನಾ, ನಮೃತ, ಕೀರ್ತಿ, ಕಾವ್ಯ ಹೆಗಡೆ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕೌಶಲ್ಯ ವೆಂಕಟರಮಣ ಹೆಗಡೆ, ಈಕೆ 13 ವರ್ಷದ ಬಾಲಕಿ; ಉತ್ತರ ಕನ್ನಡ ಜಿಲ್ಲೆಯ ಕಾನಸೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾಳೆ. ತನ್ನ ಅಪ್ಪನ ಮೇಲಿರುವ ಪ್ರೀತಿ, ಕಾಳಜಿ, ಗೌರವವು ಆಕೆಯು ಧೈರ್ಯವಾಗಿ ಸಾಹಸ ಮೆರೆಯುವಲ್ಲಿ ಸಹಕರಿಸಿದೆ. ಮಾರ್ಚ್ ಹದಿನೈದು 2021 ರಂದು ವೆಂಕಟರಮಣ ಅವರು ಹತ್ತಿರದ ಹಳ್ಳಿಯಿಂದ ಮನೆಗೆ ಜೀಪಿನಲ್ಲಿ ಮರಳುತ್ತಿರುವಾಗ ಅಪಘಾತ ಸಂಭವಿಸಿದೆ. ವೆಂಕಟರಮಣ ಅವರೊಂದಿಗೆ ಅವರ ಮಗಳು ಕೌಶಲ್ಯ, ಹಾಗೂ ಐದು ವರ್ಷದ ಮಗ ಕೂಡ ಇದ್ದ.

ನಡೆದ ರಸ್ತೆ ಅಪಘಾತದಲ್ಲಿ ಅಪ್ಪ ಮತ್ತು ಮಗ ಇಬ್ಬರು ಜೀಪಿನಡಿಯಲ್ಲಿ ಸಿಲುಕಿಕೊಂಡಿದ್ದರು. ಕೌಶಲ್ಯ ತನ್ನ ತಂದೆಯನ್ನು ರಕ್ಷಿಸಲು ಕೈಲಾದಷ್ಟು ಪ್ರಯತ್ನಪಟ್ಟಿದ್ದಾಳೆ. ನಂತರ ಸಹಾಯಕ್ಕಾಗಿ ಅರಸಿ ಸುಮಾರು 2 km ದೂರ ಓಡಿ ಗ್ರಾಮಸ್ಥರಿಗೆ ತಿಳಿಸಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಈ ಮುದ್ದು ಮಗಳ ಸಮಯ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ವೆಂಕಟರಮಣ ಅವರು ‘ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಅನಿಸುತ್ತಿದೆ. ಅಂದು ಕಳೆದು ಹೋಗುತ್ತಿರುವ ಜೀವವನ್ನು ಉಳಿಸಿದವಳು ಇವಳೇ. ನಾನು ನನ್ನ ಮಗಳಿಂದಾಗಿ ಮರು ಹುಟ್ಟು ಪಡೆದಿರುವೆ’ ಎಂದು ಹೇಳಿದ್ದಾರೆ. ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಪಡೆಯುವ ಎಲ್ಲಾ ಅರ್ಹತೆಯನ್ನು ಹೊಂದಿದ್ದ ಕೌಶಲ್ಯ ಅವಳನ್ನು ಗುರುತಿಸಿ ಪ್ರಶಸ್ತಿ ಸಲ್ಲಿಸಿರುವುದಕ್ಕೆ ಇಡೀ ಉತ್ತರಕನ್ನಡ ಜಿಲ್ಲೆಯ ಮಂದಿಗಳೇ ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಕುಳಿತು ಆಟ ಪಾಠಗಳಿಂದ ಸಮಯವನ್ನು ಕಳೆಯುವ ವಯಸ್ಸಿನಲ್ಲಿ ತನ್ನ ತಂದೆಯನ್ನು ರಕ್ಷಿಸಿ ಊರೆಲ್ಲ ಜನಪ್ರಿಯಳಾಗಿದ್ದಾಳೆ. ಮುಗ್ಧ ಮನಸ್ಸಿನ ಈ ಬಾಲಕಿ ಪ್ರಶಸ್ತಿ ದೊರಕಿರುವುದಕ್ಕಿಂತಲೂ, ತನ್ನ ಅಪ್ಪನ ಪ್ರಾಣವನ್ನು ತಾನೇ ಉಳಿಸಿರುವುದು ದೊಡ್ಡಗೌರವ ಎನ್ನುತ್ತಿದ್ದಾಳೆ.

Leave a Comment

error: Content is protected !!