ಏಷ್ಯಾದಲ್ಲಿ ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಯಾವುದು ಗೊತ್ತೇ? ಓದಿ.

ನಮಗೆಲ್ಲ ತಿಳಿದಿರುವಂತೆಯೇ ಏಳು ಸುತ್ತಿನ ಕೋಟೆ, ಸಿಡಿಲಿಗು ಬೆಚ್ಚದ ಅಂತಹ ಉಕ್ಕಿನ ಕೋಟೆ ಹೊಂದಿರುವ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಆದರ್ಶದ ಮಹಿಳೆ ಓಬವ್ವನನ್ನೂ, ಮಾದರಿ ನಾಯಕರಾದಂತಹ ಮದಕರಿ ನಾಯಕರನ್ನು ನೀಡಿದ ಗಂಡು ಮೆಟ್ಟಿದ ನಾಡು ವೀರ ಯೋಧರ ಬೀಡು ಚಿತ್ರದುರ್ಗ ಜಿಲ್ಲೆ. ಗಾಳಿ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಯಲ್ಲಾಗಲೀ, ರಾಜ್ಯಕ್ಕೆ ಉತ್ತಮ ಸಾಹಿತಿಗಳನ್ನು ನೀಡುವುದರಲ್ಲಿ ಆಗಲೀ, ಅಮೂಲ್ಯ ರತ್ನಗಳನ್ನು ನೀಡುವುದರಲ್ಲಿ ಆಗಲಿ ಅಥವಾ ನಮ್ಮ ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದರಲ್ಲಾಗಲಿ ಈ ನಗರ ನೀಡಿರುವ ಕಾಣಿಕೆ ಅದ್ವಿತೀಯ. ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರನ್ನು ಪರಿಚಯಿಸಿದ ಇತಿಹಾಸವನ್ನು ಸೃಷ್ಟಿಸಿದ ನಾಗರಹಾವು ಚಲನಚಿತ್ರ ಹಾಗೂ ಕಿಚ್ಚ ಸುದೀಪ್ ಅವರನ್ನು ಬೆಳಕಿಗೆ ತಂದ ಹುಚ್ಚ ಚಲನಚಿತ್ರ ಇವು ಚಿತ್ರದುರ್ಗದಲ್ಲೇ ಚಿತ್ರೀಕರಣಗೊಂಡಿದ್ದು ನಾವು ಮರೆಯಲಾಗದ ಸ್ಥಳಗಳಾಗಿವೆ. ನಾಗರಹಾವು ಚಲನಚಿತ್ರದಲ್ಲಿ ಕರ್ಪೂರದ ಗೊಂಬೆ ಗೀತೆ ಹಾಗೂ ಹುಚ್ಚ ಸಿನಿಮಾದಲ್ಲಿ ಉಸಿರೇ ಉಸಿರೇ ಗೀತೆಗಳು ಈ ಅಮೋಘ ಸ್ಥಳದಲ್ಲಿ ಚಿತ್ರೀಕರಣಗೊಂಡಿದ್ದು ಇಲ್ಲಿನ ವಿಶೇಷ ಎನ್ನಬಹುದು.

ಈ ಸ್ಥಳದ ಇನ್ನೊಂದು ವಿಶೇಷ ಎಂದರೆ ಕನ್ನಡಿಗರ ಜೀವನಾಡಿ ಕಾವೇರಿ ನದಿಗೆ ಕಟ್ಟಲಾದ ಕನ್ನಂಬಾಡಿ ಅಣೆಕಟ್ಟು ಇದರ ನಿರ್ಮಾಣಕ್ಕೆ ಒಂದು ಮೂಲ ಮಾದರಿ ಬೇಕಾಗಿರುತ್ತದೆ. ಆ ಮೂಲ ಮಾದರಿಯೆ ಮೈಸೂರು ಸಂಸ್ಥಾನದ ರಾಜವಂಶಸ್ಥರ ಉದಾರ ಕೊಡುಗೆ. ಹೆಚ್ಚು ಮಳೆ ಬೀಳದೆ ಬರದ ಭೂಮಿಯಾಗಿ ಬಯಲುಸೀಮೆ ಯಾಗಿದ್ದ ಚಿತ್ರದುರ್ಗಕ್ಕೆ ಜೀವ ಸೆಲೆಯಾದ ಏಷ್ಯಾದಲ್ಲಿ ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಇದುವೇ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಮಾರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯ. ಇದರ ಬಗ್ಗೆ ಈ ಲೇಖನದ ಮೂಲಕ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ವೇದಾವತಿ ನದಿ ಚಿತ್ರದುರ್ಗ ಜಿಲ್ಲೆಯ ಪ್ರಮುಖ ನದಿ. ಚಿಕ್ಕಮಂಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಅಥವಾ ಬಾಬಾಬುಡನ್ ಗಿರಿ ಇಲ್ಲಿ ಜನಿಸುವ ವೇದ ಎಂಬ ನದಿ ಕಡೂರಿನ ಬಳಿ ಅವತೀ ಎಂಬ ನದಿಯನ್ನು ಸೇರಿ ವೇದಾವತಿ ಆಗಿ ಮುಂದಕ್ಕೆ ಹರಿಯುತ್ತದೆ. ಊರಿಗೆ ಹಿರಿಯೂರಿನ ಸಮೀಪ ಇರುವ ಮಾರಿಕಣಿವೆ ಎಂಬಲ್ಲಿ ಎರಡು ಬೆಟ್ಟಗಳ ನಡುವೆ ನಿರ್ಮಿಸಿರುವ ಜಲಾಶಯವೇ ವಾಣಿವಿಲಾಸ ಸಾಗರ. ಹಿಂದಿನ ಕಾಲದ ಇಂಜಿನಿಯರ್ಗಳ ಕೌಶಲ್ಯಕ್ಕೆ ಸವಾಲಾಗಿರುವ ವಾಣಿವಿಲಾಸ ಸಾಗರ ಇದನ್ನು ಕಟ್ಟಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದ ತಂತ್ರಜ್ಞರು. ಈ ಜಲಾಶಯದ ವಿಶೇಷತೆ ಏನಪ್ಪಾ ಅಂದರೆ ಜಲಾಶಯದ ನೋಟ ಇದು ಭಾರತದ ಭೂಪಟ ದಂತೆ ಕಂಡುಬರುತ್ತದೆ.

ನಮ್ಮ ಭಾರತ ದೇಶದಲ್ಲಿ ನೀರಾವರಿಗೆಂದು ನಿರ್ಮಿಸಿದ ಪ್ರಪ್ರಥಮ ಮಾನವ ನಿರ್ಮಿತ ಜಲಾಶಯ ಹಾಗೂ ರಾಜ್ಯದ ಪ್ರತಿಷ್ಠಿತ ಕೆಆರ್ ಎಸ್ ಜಲಾಶಯಕ್ಕೇ ಮೂಲ ನಕ್ಷೆಯಾದ ಜಲಾಶಯ ಎಂಬ ಪ್ರಖ್ಯಾತಿ ಈ ಜಲಾಶಯಕ್ಕೆ ಇದೆ. ಏಷ್ಯಾ ಖಂಡದಲ್ಲೆ ಪ್ರಪ್ರಥಮವಾಗಿ ಮಾನವನಿಂದ ನಿರ್ಮಿಸಲ್ಪಟ್ಟ ಅತಿ ದೊಡ್ಡ ಜಲಾಶಯ ಎಂಬ ಕೀರ್ತಿ ವಾಣಿವಿಲಾಸ ಸಾಗರಕ್ಕಿದೆ. ಸಕಾಲದಲ್ಲಿ ಮಳೆಬಾರದೆ ಯಾವಾಗಲೂ ನೀರಿನ ತೀವ್ರ ಅಭಾವಕ್ಕೆ ಒಳಗಾಗುತ್ತಿದ್ದ ಚಿತ್ರದುರ್ಗ ಜಿಲ್ಲೆಗೆ ನೀರಿನ ಆಸರೆಯನ್ನು ನೀಡುವ ಉದ್ದೇಶದಿಂದ ಈ ಜಲಾಶಯದ ನಿರ್ಮಾಣ ಯೋಜನೆಯನ್ನು ಬಹಳ ಹಿಂದೆಯೇ ಆಯೋಜಿಸಲಾಗಿತ್ತು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಅಂದಿನ ಕಾಲದ ದಿವಾನರಾಗಿದ್ದ ಕೆ ಶೇಷಾದ್ರಿ ಅಯ್ಯರ್ ಅವರ ಧೈರ್ಯ ಹಾಗೂ ಉತ್ಸಾಹದ ಫಲವಾಗಿ ಎನ್ನಬಹುದು.

ಜಲಾಶಯದ ನಿರ್ಮಾಣದ ಹಿನ್ನೆಲೆಯೇನು ಎಂದು ತಿಳಿದುಕೊಳ್ಳುವುದಾದರೆ 1883 ರಲ್ಲಿ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಇವರ ಆಳ್ವಿಕೆಯ ಕಾಲದಲ್ಲಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಯಿತು. ಇವುಗಳಲ್ಲಿ ವಾಣಿವಿಲಾಸಸಾಗರ ಜಲಾಶಯ ನಿರ್ಮಾಣ ಕಾರ್ಯ ಒಂದು ಪ್ರಮುಖವಾಗಿತ್ತು. ಈ ಜಲಾಶಯದ ನಿರ್ಮಾಣಕ್ಕಾಗಿ ಪ್ರಯತ್ನ ನಡೆಸಿದಾಗ ಬ್ರಿಟಿಷರ ಅಧೀನದಲ್ಲಿದ್ದ ಅಂದಿನ ಮದ್ರಾಸ್ ಸರ್ಕಾರವು ತೀವ್ರ ಆಕ್ಷೇಪಣೆಯನ್ನು ಉಂಟುಮಾಡಿತ್ತು. ಯಾವುದೇ ಒತ್ತಡಕ್ಕೂ ಮಣಿಯದ ಶೇಷಾದ್ರಿ ಅಯ್ಯರ್ ಅವರು ಹನುಮನ ದಲ್ಲಿ ಹರಿಯುವ ನೀರನ್ನು ಬಳಸಿಕೊಳ್ಳಲು ನಮಗೆ ಹಕ್ಕಿದೆ ನಾವು ಯಾವುದೇ ಆಕ್ಷೇಪಣೆಗೆ ಮಣಿಯುವುದಿಲ್ಲ ಎಂದು ಹೇಳುತ್ತಾರೆ. ಆಗಿನ ಮೈಸೂರು ರಾಜ ರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಇದಕ್ಕೆ ಬೆಂಬಲಿಸಿದ್ದರು. ಈ ಜಲಾಶಯದ ನಿರ್ಮಾಣಕಾರ್ಯದಲ್ಲಿ ಸಿಟಿ ದಲಾಳವರು ಸೂಪರಿಡೆಂಟ್ ಇಂಜಿನಿಯರಾಗಿ ಕಾರ್ಯನಿರ್ವಹಿಸಿದ್ದಾರೆ. 1898 ರಲ್ಲಿ ಆರಂಭಗೊಂಡ ಈ ಜಲಾಶಯದ ನಿರ್ಮಾಣ 1907 ರಲ್ಲಿ ಮುಕ್ತಾಯಗೊಂಡಿತ್ತು. ಈ ಜಲಾಶಯದ ನಿರ್ಮಾಣಕ್ಕೆ ಒಂಬತ್ತು ವರ್ಷಗಳ ಸತತ ಪರಿಶ್ರಮ ಬೇಕಿತ್ತು. ಇದರ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ತಗುಲಿದ ವೆಚ್ಚ ಸುಮಾರು 45 ಲಕ್ಷ ರೂಪಾಯಿಗಳು.

ಈ ಜಲಾಶಯ ಕರ್ನಾಟಕದಲ್ಲಿ ಅತ್ಯಂತ ಹಳೆಯ ಜಲಾಶಯ ವಾಗಿದೆ. ಇದು 1330 ಅಡಿಗಳಷ್ಟು ಉದ್ದ ಹಾಗೂ 142 ಅಡಿ ಎತ್ತರವನ್ನು ಹೊಂದಿದೆ. ವೇದಾವತಿ ನದಿ ಇಂದ ವ್ಯರ್ಥವಾಗುತ್ತಿದ್ದ ನೀರನ್ನು ಚಿತ್ರದುರ್ಗದ ರೈತರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಹೀಗೆ ಅನೇಕ ಕಾರಣಗಳಿಗೆ ಉಪಯೋಗಕರ ಆಗುವಂತೆ ಮಾಡಿ ಈ ಭಾಗದ ಜನರಿಗೆ ನೀರಿನ ಅಭಾವ ನಿವಾರಿಸಿ ರೈತರಿಗೆ ದಾರಿದೀಪವಾದ ಜಲಾಶಯ ವಾಣಿವಿಲಾಸಸಾಗರ ಜಲಾಶಯ ವಾಗಿದೆ. ಈ ಜಲಾಶಯಕ್ಕೆ ಹೊಂದಿಕೊಂಡಂತೆ ಜಲಾಶಯದ ಹಿಂಬದಿಯಲ್ಲಿ ಕಣಿವೆ ಮಾರಮ್ಮನ ದೇವಾಲಯವಿದೆ. ಜಲಾಶಯ ಪೂರ್ಣಗೊಳ್ಳಲು ಕಾರಣ ಕಣಿವೆ ಮಾರಮ್ಮ ದೇವಸ್ಥಾನ. 1898 ರಲ್ಲಿ ಜಲಾಶಯದ ನಿರ್ಮಾಣಕಾರ್ಯ ಆರಂಭವಾದ ಮೇಲೆ ನೀರಿನ ರಭಸವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಗ ಮೈಸೂರು ಸಂಸ್ಥಾನದ ಜ್ಯೋತಿಷ್ಯಶಾಸ್ತ್ರದ ಮೊರೆ ಹೋಗುತ್ತದೆ.

ಜ್ಯೋತಿಷ್ಯದಲ್ಲಿ ಹೇಳಿದಂತೆ ಅಲ್ಲಿ ತಾಯಿ ಮಾರಮ್ಮನ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಮಾರಮ್ಮ ತಾಯಿ ತನ್ನ ಕಾಲಿನಿಂದ ವೇದಾವತಿ ನದಿಯ ನೀರಿನ ರಭಸವನ್ನು ತಡೆಹಿಡಿದಿರುವುದು ಜಲಾಶಯದ ಭದ್ರತೆಯ ರಹಸ್ಯ ಎಂದು ನಂಬಲಾಗುತ್ತದೆ. ಈ ಜಲಾಶಯವನ್ನು ವೀಕ್ಷಿಸಲು ಬಂದವರು ಮೊದಲು ಕೆಳಗಿರುವ ಮಾರಮ್ಮನ ದೇವಾಲಯವನ್ನು ಪ್ರವೇಶಿಸಿದ ದೇವಿಯ ದರ್ಶನವನ್ನು ಪಡೆದು ನಂತರ ಜಲಾಶಯಕ್ಕೆ ತೆರಳುವುದು ವಾಡಿಕೆಯಲ್ಲಿದೆ. ಎರಡು ಗುಡ್ಡಗಳ ಮಧ್ಯದ ಕಣಿವೆ ಅಂತ ಪ್ರದೇಶದಲ್ಲಿ ದೇವಿಯ ದೇಗುಲ ಇರುವ ಕಾರಣದಿಂದಾಗಿ ಕಣಿವೆ ಮಾರಮ್ಮ ಎನ್ನುವ ಹೆಸರು ಬಂದಿದೆ. ಈ ದೇವಸ್ಥಾನದಿಂದಲೇ ಈ ಪ್ರದೇಶಕ್ಕೆ ಮಾರಿ ಕಣಿವೆ ಎಂಬ ಹೆಸರು ಸಹ ಬಂದಿದೆ. ಈ ದೇವಸ್ಥಾನದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಮಾರಮ್ಮ ದೇವಿಯನ್ನು ನಾವು ಕಾಣಬಹುದು. ಈ ದೇವಿಯ ಜಾತ್ರೆಗೆ ತಮಿಳುನಾಡು ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಾನಾ ಜಿಲ್ಲೆಗಳಿಂದ ಜನರು ಆಗಮಿಸುವುದು ವಿಶೇಷವಾಗಿದೆ. ವಾಣಿವಿಲಾಸಸಾಗರ ಜಲಾಶಯ ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಕೆಲವು ಪ್ರದೇಶಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ. ಹಿರಿಯೂರಿನ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆಯುವ ತೆಂಗು, ಅಡಕೆ , ದಾಳಿಂಬೆ, ಮತ್ತಿತರ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಕೃಷಿ ಚಟುವಟಿಕೆಗಳು ನಡೆಯುವುದು ಸಹ ಇದೆ ಜಲಾಶಯದ ನೀರಿನ ಮೂಲಕ.

ವಾಣಿವಿಲಾಸ ಸಾಗರ ಇದೊಂದು ಚೆಲುವಿನ ತಾಣ ಹಾಗೂ ಪ್ರಶಾಂತವಾಗಿದೆ. ಇದು ನೀರಿನಿಂದ ತುಂಬಿಕೊಂಡಿರುವಾಗ ಅದರ ಸೊಬಗು ವರ್ಣನಾತೀತ. ಸುತ್ತಲೂ ಬೆಟ್ಟಗಳ ಸಾಲು , ಕಣ್ಣಿಗೆ ಕಾಣಿಸದಷ್ಟು ದೂರ ಕಾಣುತ್ತಲೇ ಇರುವ ನೀರು, ತಂಪಾಗಿ ಬೀಸುವ ಗಾಳಿಯ ವೇಗಕ್ಕೆ ಬಂದು ಅಪ್ಪಳಿಸುವ ಅಲೆಗಳು ಇವೆಲ್ಲವೂ ವಾರದಲ್ಲಿ ವಿಹಾರಕ್ಕೆ ಬರುವ ಪ್ರವಾಸಿಗಳಿಗೆ ಮಾರಿಕಣಿವೆ ಸೊಗಸಾದ ಪ್ರದೇಶ ಎನ್ನಬಹುದು. ಅಣೆಕಟ್ಟಿನ ಎರಡು ಕಡೆ ಕಪ್ಪು ಶಿಲೆಯ ಸುಂದರ ಮಂಟಪಗಳಿವೆ. ಸೂರ್ಯಾಸ್ತಮಾನ ಇಲ್ಲಿನ ಇನ್ನೊಂದು ವಿಶೇಷ. ಇಲ್ಲಿನ ವಿಶಿಷ್ಟ ಚೆಲುವಿನಿಂದ ಹಲವಾರು ಕನ್ನಡ ಸಿನಿಮಾಗಳನ್ನು ಚಿತ್ರಿಸಲಾಗಿದೆ .

Leave a Comment

error: Content is protected !!