ಪಾಂಡವರು ಸ್ವರ್ಗಕ್ಕೆ ಹೋಗುವ ಮೊದಲು ಕೊನೆಯದಾಗಿ ಭೇಟಿ ನೀಡಿದ ದೇವಾಲಯ ಇದಂತೆ

ನಾವೆಲ್ಲರೂ ಚಿಕ್ಕ ವಯಸ್ಸಿನಿಂದ ಮಹಾಭಾರತದ ಕಥೆ ಕೇಳಿಕೊಂಡು ಬೆಳೆದವರು. ಹಾಗಾಗಿ ಮಹಾಭಾರದ ಎಲ್ಲಾ ಕಥೆಗಳು ನಮಗೆ ಗೊತ್ತಿರುವುದೆ ಆಗಿದೆ‌. ಆದರೆ ಪಾಂಡವರು ಯುದ್ಧ ಗೆದ್ದು, ರಾಜ್ಯಭಾರ ಮಾಡಿ. ಇನ್ನೂ ನಮ್ಮ ಕೊನೆಯ ಕಾಲ ಬಂದಿದೆ ಎನ್ನುವಾಗ ಸ್ವರ್ಗ ಸೇರಲು ಹಿಮಾಲಯದ ಮಾರ್ಗವಾಗಿ ಹೊಗುತ್ತಾರೆ. ಹೀಗೆ ಸ್ವರ್ಗಕ್ಕೆ ಹೊರಟಾಗ ಪಾಂಡವರು ಕೊನೆಯದಾಗಿ ಒಂದು ದೇಗುಲಕ್ಕೆ ಭೇಟಿ ನೀಡುತ್ತಾರೆ. ಹಾಗಾದರೆ ಆ ದೇವಾಲಯ ಯಾವುದು? ಅದರ ಇತಿಹಾಸದ ಬಗ್ಗೆ ನಾವು ತಿಳಿಯೋಣ.

ಮಂದಾಕಿನಿ ನದಿಯ ದಡದಲ್ಲಿ ಹಿಮಾಲಯದ ಗರ್ಭದಲ್ಲಿ ಇದೆ ಈ ಸುಂದರ, ಆಕರ್ಷಕ ದೇಗುಲ. ಹಿಂದೂಗಳ ಅತಿ ಶ್ರೇಷ್ಠ ಹಾಗೂ ಪವಿತ್ರ ದೇವಾಲಯಗಳಲ್ಲಿ ಇದು ಒಂದು. ಈ ದೇವಸ್ಥಾನದಲ್ಲಿ ಮಂಗಳಾರತಿ ಮಾಡುವ ಸಮಯದಲ್ಲಿ ಮಂತ್ರಗಳನ್ನು ಕನ್ನಡದಲ್ಲಿ ಹೇಳುತ್ತಾರೆ. ಈ ದೇವಾಲಯದ ಹೆಸರು ಕೇದಾರನಾಥ. ಹಿಮಾಲಯದ ಶ್ರೇಷ್ಠ ದೇವಸ್ಥಾನ. ಉತ್ತರಾಖಂಡದ ರುದ್ರಪ್ರಯಾಗದಲ್ಲಿದೆ ಈ ಕೇದಾರನಾಥ ದೇವಾಲಯ. ಕೇದಾರನಾಥ ಶಿವನ ಆರಾಧಕರ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷಧಾಮವಾದ ಕೇದಾರನಾಥ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಪವಿತ್ರ ದೇವಾಲಯ ಗರ್ಲವಾಲ್ ನಲ್ಲಿ 3583 ಮೀ. ಎತ್ತರದಲ್ಲಿ ಇದೆ. ಪಾಂಡವರು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಕೇದಾರನಾಥ ಪ್ರಾಂತ್ಯದಲ್ಲಿ ಶಿವನನ್ನು ಸಂತೋಷ ಪಡಿಸುವ ಸಲುವಾಗಿ ಶಿವನ ದೇವಾಲಯ ಕಟ್ಟಿದರು. ನಂತರದಲ್ಲಿ ಪುನರ್ನಿರ್ಮಾಣ ಶ್ರೀ ಆದಿ ಶಂಕರಾಚಾರ್ಯರಿಂದ ನೇರವೇರಿತು. ಪಂಚಕೇದಾರದ ಪವಿತ್ರ ದೇವಾಲಯಗಳಲ್ಲಿ ಒಂದು. ಗಂಗಾ ನದಿಯ ಉಪನದಿ ಮಂದಾಕಿನಿ ಕೇದಾರನಾಥದ ಜೀವನದಿ. ರುದ್ರಪ್ರಯಾಗದಲ್ಲಿ ಮಂದಾಕಿನಿಯಾಗಿ ಹರಿಯುವ ಈ ನದಿ ಮುಂದೆ ಅಲಕನಂದಾ ನದಿಯನ್ನು ಸೇರಿಕೊಳ್ಳುತ್ತದೆ. ಬಸ್, ಟ್ಯಾಕ್ಸಿ, ಅಥವಾ ಮಿನಿಬಸ್ ಗಳ ಮೂಲಕ ಕೇದಾರನಾಥವನ್ನು ತಲುಪಲು ಸಾಧ್ಯ. ದೆಹಲಿ, ಹರಿದ್ವಾರ, ರುದ್ರಪ್ರಯಾಗ ನಂತರ ಋಷಿಕೇಶ ಕೊನೆಯದಾಗಿ ಗೌರಿಕುಂಡ ತಲುಪಬಹುದು. ನಂತರದ ಪ್ರಯಾಣ ಯಾವುದೆ ವಾಹನಗಳಿಂದ ಸಾಧ್ಯವಿಲ್ಲ. 18 ಕಿ.ಮೀ ಎತ್ತರದ ಚಾರಣವನ್ನು ಎಂದರೆ ಟ್ರಕ್ಕಿಂಗ್ ಗೌರಿಕುಂಡದಿಂದ ಮಾಡಬೇಕು. ಗೌರಿಕುಂಡದಿಂದ ಕುದುರೆ ಹಾಗೂ ಪಲ್ಲಕ್ಕಿಗಳನ್ನು ಬಳಸಿ ಪ್ರವಾಸಿಗರು ಚಾರಣ ಮಾಡುತ್ತಾರೆ. ಋಷಿಕೇಶದ ಜಾಲಿಗ್ರಾಳ್ ವಿಮಾನ ನಿಲ್ದಾಣ ಕೇದಾರನಾಥಕ್ಕೆ ಹತ್ತಿರವಾದ ವಿಮಾನ ನಿಲ್ದಾಣವಾಗಿದೆ. ನಂತರ ಟ್ಯಾಕ್ಸಿ ಮೂಲಕ ಗೌರಿಕುಂಡಕ್ಕೆ ಬಂದು ಚಾರಣ ಮಾಡಬೇಕು.

ಹರಿದ್ವಾರದ ವರೆಗೆ ರೈಲಿನ ವ್ಯವಸ್ಥೆ ಇರುತ್ತದೆ. ಅದರ ನಂತರ ಗೌರಿಕುಂಡಕ್ಕೆ ಟ್ಯಾಕ್ಸಿ ಮೂಲಕ ತಲುಪಬಹುದು. ಬೂದು ಕಲ್ಲಿನ ಗಾತ್ರದ ಬಂಡೆಗಳಿಂದ ಈ ಭವ್ಯ ದೇವಾಲಯದ ನಿರ್ಮಾಣವಾಗಿದೆ. ಪಾಳಿ ಭಾಷೆಯ ಶಾಸನಗಳನ್ನು ಗರ್ಭಗುಡಿಯಲ್ಲಿ ನೋಡಬಹುದು. ಶಿವನ ನಂದಿಯ ಪ್ರತಿಮೆ ಕೂಡ ಇದೆ. 2013 ರಲ್ಲಿ ಉಂಟಾದ ಪ್ರವಾಹದಿಂದ ಕೇದಾರನಾಥದ ಸುತ್ತಲಿನ ಪ್ರದೇಶ ಕೊಚ್ಚಿಹೋಗಿತ್ತು. ಶಿವನ ಕೃಪೆಯಿಂದ ದೇವಸ್ಥಾನ ಹಾಗೆಯೆ ಇತ್ತು. ಕೇದಾರನಾಥದ ಚಾರಣದ ವೇಳೆಯಲ್ಲಿ ಸುತ್ತಲಿನ ಕಡಿದಾದ ದಾರಿಗಳು, ಹುಲ್ಲುಗಾವಲುಗಳು, ಹಿಮದಿಂದ ಆವೃತ್ತವಾದ ಹಿಮ ಶಿಖರಗಳು, ಹೀಗೆ ಪ್ರಕೃತಿಯ ವೀಕ್ಷಿಸಲು ಆಗುತ್ತದೆ. ಸಾವಿರಾರು ವರ್ಷಗಳಿಂದ ಹಿಮ ಕುಸಿತ, ಪ್ರವಾಹ, ಭೂಕಂಪದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಕೇದಾರನಾಥ. ಎಪ್ರಿಲ್ ಕೊನೆಯಿಂದ ನವೆಂಬರ್ ತಿಂಗಳ ಆರಂಭದ ವರೆಗೆ ಅಂದರೆ ಆರು ತಿಂಗಳು ಮಾತ್ರ ಈ ದೇವಾಲಯ ತೆರೆದಿರುತ್ತದೆ. ಕಾರ್ತಿಕ ಮಾಸದ ಮೊದಲದಿನ, ಚಳಿಗಾಲ ಮತ್ತು ನವೆಂಬರ್ ತಿಂಗಳ ಮೊದಲಲ್ಲಿ ದೇವಾಲಯ ಮುಚ್ಚಲಾಗುತ್ತದೆ. ರುದ್ರಪ್ರಯಾಗದ ಓಂಕಾರೇಶ್ವರನ ಸನ್ನಿಧಿಯಲ್ಲಿ ಶಿವನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ವೈಶಾಖ ಮಾಸದಲ್ಲಿ ಆರು ತಿಂಗಳ ನಂತರ ಮತ್ತೆ ಕೇದಾರನಾಥ ದೇವಾಲಯ ತೆರೆಯಲಾಗುತ್ತದೆ. ಬೆಳಿಗ್ಗೆ 6 ರಿಂದ 3 ಗಂಟೆಯ ವರೆಗೆ ಹಾಗೂ ಸಂಜೆ 5 ಗಂಟೆಯಿಂದ 9 ಗಂಟೆಯ ವರೆಗೆ ದೇವಾಲಯ ತೆರೆದಿರುತ್ತದೆ. ಕರ್ನಾಟಕದ ವೀರಶೈವ ಸಮುದಾಯದವರು ಕೇದಾರನಾಥದ ಮುಖ್ಯ ಅರ್ಚಕರು.

ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಹಿಂದು ಸಮುದಾಯದಲ್ಲಿ ಅತ್ಯಂತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಈ ಕೇದಾರನಾಥ ದೇವಾಲಯವನ್ನು ಒಮ್ಮೆಯಾದರೂ ನೋಡುವ ಹಂಬಲ ಎಲ್ಲರಲ್ಲಿಯೂ ಇದೆ. ಪ್ರವಾಹ, ಭೂಕಂಪಗಳನ್ನು ಮೆಟ್ಟಿನಿಂತು ಶಿವನ ಮಹಿಮೆ ತೋರಿದ ದೇವಾಯಲ ಇದು.

Leave a Comment

error: Content is protected !!