ಸೆಲ್ಫಿಗಾಗಿ ಹುಲಿ ಹಿಂದೆ ಓಡಿ ಬೆನ್ನಟ್ಟಿದ ಯುವಕರು ನಂತರ ಆಗಿದ್ದೇನು

ಏನನ್ನು ಮಾಡಬಾರದು ಎಂದು ಬೋರ್ಡ್ ಹಾಕಿರುತ್ತಾರೊ, ಅದೇ ಬೋರ್ಡ್ ಕೆಳಗೆ ಮಾಡಬಾರದನ್ನು ಮಾಡುವುದು ಒಂದಿಷ್ಟು ಜನರ ರೂಢಿ. ‘ವಾಹನ ನಿಲುಗಡೆ ನಿಷೇಧಿಸಿದೆ’ ಎಂಬಲ್ಲೆ ವಾಹನಗಳನ್ನು ನಿಲ್ಲಿಸುವುದು. ‘ರಸ್ತೆ ತಿರುವು ಇದೆ ನಿಧಾನವಾಗಿ ಚಲಿಸಿ’ ಎಂಬ ಪ್ರದೇಶದಲ್ಲೇ ಅಡ್ಡಾ ತಿಡ್ಡಿ ವಾಹನ ಚಲಿಸಿ ಅಪಘಾತಕ್ಕೊಳಗಾಗುವುದು. ದಟ್ಟ ಅರಣ್ಯ ಪ್ರದೇಶದ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿರುವ ‘ಕಾಡು ಪ್ರಾಣಿಗಳಿವೆ’ ಎಂಬ ಬೋರ್ಡ ಸುತ್ತಮುತ್ತವೇ ಗಾಡಿ ನಿಲ್ಲಿಸಿ, ಅವುಗಳನ್ನ ಹುಡುಕುವುದು.

ನಿಯಮಗಳನ್ನು ಉಲ್ಲಂಘಿಸುವುದು ಇಂಥವರಿಗೆ ಮೋಜಿನ ಸಂಗತಿ ಇರಬಹುದೇನೋ ಆದರೆ ಈ ಬೋರ್ಡ್ ಗಳು ಸಾರ್ವಜನಿಕರ ಹಿತಾಸಕ್ತಿಯಿಂದಲೇ ಹಾಕಿರುವಂಥದ್ದು. ‘ಕಾಡು ಪ್ರಾಣಿಗಳಿವೆ’ ಎಂದು ಬರೆದಿದ್ದರೆ ‘ಕಾಡು ಪ್ರಾಣಿಗಳನ್ನು ಹುಡುಕಿಕೊಂಡು ಅಥವಾ ಅವುಗಳು ಕಂಡಾಗ ಹತ್ತಿರ ಹೋಗದಿರಿ. ಕಾಡು ಪ್ರಾಣಿಗಳು ಭಯ ಬೀಳಬಹುದು ಅಥವಾ ಅದರಿಂದಾಗುವ ಅಪಾಯಕ್ಕೆ ನೀವು ಸಿಲುಕಬಹುದು. ಅವುಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಬಹುದು’ ಎಂಬ ಎಚ್ಚರಿಕೆಯಾಗಿರುತ್ತದೆ.

ಅರಣ್ಯ ಇಲಾಖೆಯವರು ದೊಡ್ಡ ದೊಡ್ಡ ಫಲಕಗಳನ್ನು ಹಾಕುವುದರ ಮೂಲಕ, ಮಾಧ್ಯಮಗಳಲ್ಲಿ ಹಲವಾರು ಬಾರಿ ಕಾಡು ಪ್ರಾಣಿಗಳ ರಕ್ಷಣೆಯ ಬಗ್ಗೆ ಮತ್ತು ಅವುಗಳಿಂದ ನಮ್ಮ ರಕ್ಷಣೆಯ ಬಗ್ಗೆ ಆಗಾಗ ತಿಳಿಸುತ್ತಿರುತ್ತಾರೆ. ಇದನ್ನು ಮೀರಿ ಕೆಲವರು ಆ ಪ್ರಾಣಿಗಳಿಗೆ ತೊಂದರೆ ಕೊಡುತ್ತಿರುತ್ತಾರೆ. ಇದರಿಂದಾಗಿ ಕೆಲವರು ತಮಗೆ ತಾವೇ ಅಪಾಯ ತಂದುಕೊಳ್ಳುತ್ತಾರೆ.

ಇಂತಹ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲಾಗದ ಜನ ಏನೇನೆಲ್ಲ ಮಾಡುತ್ತಾರೆ ಎಂಬುದಕ್ಕೆ ಈ ಘಟನೆಯು ಒಂದು ಉದಾಹರಣೆಯಾಗಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರಸ್ತೆಯಲ್ಲಿ ಹುಲಿಯನ್ನು ಕಂಡ ಯುವಕರು ತಮ್ಮ ವಾಹನವನ್ನು ನಿಲ್ಲಿಸಿ, ಹುಲಿಯ ವಿಡಿಯೋವನ್ನು ಮಾಡಲು ಯತ್ನಿಸಿದ್ದಾರೆ. ‘ಪನ್ನ ಟೈಗರ್ ರಿಸರ್ವ್’ ಎಂಬ ಬೋರ್ಡ್ ಸಮೀಪವೆ ಹುಲಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ, ಹಿಂಬಾಲಿಸಿ ಹೋಗಿದ್ದಾರೆ. ಇವರ ಗುಂಪಿನಲ್ಲಿಯೇ ಒಬ್ಬ ಯುವಕ ರಸ್ತೆ ದಾಟುತ್ತಿರುವ ಹುಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಸಾವಿನೊಂದಿಗೆ ಚೆಲ್ಲಾಟ ಎಂದರೆ ಇದೇ ಇರಬಹುದು. ‘ಸೆಲ್ಫಿ ಹುಚ್ಚು ಅತಿರೇಕಕ್ಕೇರಿದರೆ ಮನುಷ್ಯ ತನ್ನ ಜೀವವನ್ನು ಲೆಕ್ಕಿಸಲಾರ’ ಎಂದರೆ ತಪ್ಪೇನಿಲ್ಲ.

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ‘ಹುಲಿಯೊಂದಿಗೆ ಸೆಲ್ಫಿ’ ಯ ಬಗ್ಗೆ ಎಚ್ಚರಿಕೆ ಬರಹವನ್ನು ಪ್ರಕಟಿಸಿದ್ದಾರೆ. ಈ ರೀತಿ ವರ್ತಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸೆಲ್ಫಿ ಯುವಕರ ಬಗ್ಗೆ ಹಲವಾರು ಜನ ಟೀಕೆ ಮಾಡಿದ್ದಾರಂತೆ.

Leave a Comment

error: Content is protected !!