ಮುಕ್ಕಾಲು ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ರೈತ ಉಮೇಶ್

ಹೂವಿನ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ..ಸರ್ವ ಶಕ್ತ ದೇವನಿಗೂ ಹೂವುಗಳಿಂದ ಅಲಂಕರಿಸಿದರೆ ಪ್ರಿಯವಂತೆ. ಹಬ್ಬ ಹರಿದಿನಗಳಲ್ಲಿ ಹೂಗಳಿಲ್ಲದೆ ಕಳೆಯೇ ಇಲ್ಲ. ಮದುವೆ ಮನೆಯ ಅಂದ ಹೆಚ್ಚಿಸುವ ಕಾರ್ಯ ಹೂಗಳದ್ದೆ. ಕೆಲವು ಹೂಗಳು ಔಷಧೀಯ ವಸ್ತುವೂ ಹೌದು. ಹೂಗಳ ಸುವಾಸನೆಯೇ ಮುದ. ಇಷ್ಟೊಂದು ಉಪಯುಕ್ತವಾದ ಹೂಗಳ ಕೃಷಿ ಸರಿಯಾಗಿ ಬೆಳೆದರೆ ಲಾಭವಂತು ಹೌದು.

ಸಿರಿಗೆರೆ ಸಮೀಪದ ಹಿರೇಬೆನ್ನೂರು ಗ್ರಾಮದ ರೈತನಾದ ಉಮೇಶ್ ಅವರು ತಮ್ಮ ವ್ಯವಸಾಯ ಭೂಮಿಯಲ್ಲಿ ಚೆಂಡು ಹೂಗಳನ್ನು ಬೆಳೆದು ಹಳದಿಯಾಗಿಸಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ ಚೆಂಡು ಹೂಗಳನ್ನು ತಮ್ಮ ಮುಕ್ಕಾಲು ಎಕರೆ ಕೆಂಪು ಮಿಶ್ರಿತ ಕಪ್ಪುಬಣ್ಣದ ಮಣ್ಣು ಹೊಂದಿದ ಭೂಮಿಯಲ್ಲಿ ಬೆಳೆದಿದ್ದಾರೆ. ತಮ್ಮ ಊರ ಸಮೀಪದ ನರ್ಸರಿಯಿಂದ ಒಂಬತ್ತು ಸಾವಿರ ಸಸಿಗಳನ್ನು ತಂದು ಭೂಮಿಯನ್ನು ಹದ ಮಾಡಿ ನೆಟ್ಟಿದ್ದಾರೆ. ಇದಕ್ಕಾಗಿ ಅವರು ಮಾಡಿರುವ ಖರ್ಚು 40,000 ರೂಪಾಯಿ. 60 ರಿಂದ 80 ದಿನಗಳಲ್ಲಿ ನೆಟ್ಟ ಸಸಿಯು ಹೂ ಬಿಡಲು ಪ್ರಾರಂಭಿಸುತ್ತದೆ. ಒಂದು ಸಸಿಯು ಸುಮಾರು 2 ಕೆಜಿಗಳಷ್ಟು ಹೂವನ್ನು ನೀಡುತ್ತದೆ.

ಈ ಕುರಿತು ಉಮೇಶ್ ಅವರಲ್ಲಿ ಮಾಹಿತಿ ಪಡೆದಾಗ ಅವರು ‘ಈ ಬಾರಿ ಅತಿಯಾಗಿ ಮಳೆಯಾದ ಕಾರಣ ಎಲ್ಲಾ ಕಡೆ ನಷ್ಟವನ್ನು ಅನುಭವಿಸಿದ್ದಾರೆ. ಆದಕಾರಣ ಮಾರುಕಟ್ಟೆಯಲ್ಲಿ ಚೆಂಡು ಹೂ ಬಹು ಬೇಡಿಕೆಯದ್ದಾಗಿದೆ. ಆಯುಧ ಪೂಜೆಯಂದು ಒಮ್ಮೆ ಕಟಾವಿಗೆ ಬಂದಿತ್ತು. ದೀಪಾವಳಿಗೆ ಮತ್ತೊಮ್ಮೆ ಕಟಾವಿಗೆ ಬರಲಿದೆ. ಬಾರಿ ಮಳೆಯಿಂದಾಗಿ ಒಂದಿಷ್ಟು ಗಿಡ ಬಾಗಿ ನೆಲತಾಗಿವೆ. ಉಳಿದವುಗಳಲ್ಲಿ ಸುಂದರ ಹೂಗಳನ್ನು ಕಂಡಿದ್ದೇನೆ. ಜೀನ್ ಫ್ಲವರ್, ಯುನೋ ಫ್ಲವರ್, ವೀವ 666 ಔಷಧಗಳನ್ನು ಸಿಂಪಡಿಸಿದ್ದೇನೆ. ನನ್ನ ಮುಕ್ಕಾಲುವ ಎಕರೆ ಜಮೀನಿನಲ್ಲಿ 60 ರಿಂದ 80 ಕ್ವಿಂಟಲ್ ಹೂಗಳನ್ನು ಪಡೆಯಬೇಕೆಂದಿದ್ದೇನೆ. ನಮ್ಮ ಊರ ಹತ್ತಿರದ ಮಾರಾಟಗಾರರು ಇದನ್ನು ಒಂದು ಕೇಜಿಗೆ 100 ರೂಪಾಯಿಗಳಂತೆ ಕೊಂಡು ಹೆಚ್ಚಿನ ಬೆಲೆಯಲ್ಲಿ ಮಾರುತ್ತಾರೆ. ಕೂಲಿಕಾರರಿಗೆ ದಿನಕ್ಕೆ 300 ರೂಪಾಯಿಗಳನ್ನು ಕೊಟ್ಟು ಕೆಲಸ ಮಾಡಿಸುತ್ತಿದ್ದೇನೆ. ಹಿಂದಿನ ಕಟಾವಿನಲ್ಲಿ ಉತ್ತಮ ಲಾಭಗಳಿಸದಿದ್ದರು, ಈ ಬಾರಿ ಗಳಿಸುವ ಆಸೆ ಹೊಂದಿದ್ದೇನೆ’ ಎಂದಿದ್ದಾರೆ.

ಉಮೇಶ್ ಅವರು ಚೆಂಡು ಹೂ ಕೃಷಿಯಲ್ಲಿ ತಮ್ಮ ಸ್ನೇಹಿತರಿಂದ ತಾವು ಪಡೆದ ಮಾಹಿತಿಯನ್ನು ವಿವರಿಸಿದ್ದಾರೆ. ‘ಸ್ಥಳೀಕರಿಂದ ಕೊಂಡುಕೊಳ್ಳುವ ಸಸಿಗಳಲ್ಲಿ ಗುಣಮಟ್ಟ ಕಡಿಮೆ ಇರುವುದರಿಂದ ತಮಿಳುನಾಡಿನ ವಿಭಿನ್ನ ತಳಿಯ ಕಡಿಮೆ ವೆಚ್ಚದ ಸಸಿಗಳನ್ನು ತರಿಸಿಕೊಳ್ಳಬೇಕು. ರೋಗದ ಬಾಧೆ, ನಿರ್ವಹಣಾ ವೆಚ್ಚ ಎರಡು ಕಮ್ಮಿಯಾಗುತ್ತದೆ. ಅಲ್ಲದೆ ಒಮ್ಮೆ ಕಿತ್ತ ಹೂಗಳು ನಾಲ್ಕರಿಂದ ಐದು ದಿನಗಳವರೆಗೆ ಬಾಡದೆ ಉಳಿಯುತ್ತವೆ’ ಎಂದಿದ್ದಾರಂತೆ. ಉತ್ತಮ ಲಾಭಗಳಿಸುವ ಹಂಬಲವಿರುವ ಉಮೇಶ್ ಅವರು ಮುಂದಿನ ಬಾರಿ ವಿಭಿನ್ನ ತಳಿಗಳನ್ನು ಬೆಳೆಸುವುದಾಗಿ ಹೇಳಿದ್ದಾರೆ. ಮನೆಯ ಸದಸ್ಯರು ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿದರೆ ಮತ್ತು ಆಧುನಿಕ ಉಪಕರಣಗಳನ್ನು ಬಳಸಿದರೆ ಹೂಗಳು ಲಾಭ ತಂದು ಕೊಡುತ್ತವೆ ಎಂದು ಉಮೇಶ್ ಅವರ ತಂದೆ ಬಸವರಾಜಪ್ಪ ಅವರು ಹೇಳಿದ್ದಾರೆ.

Leave a Comment

error: Content is protected !!