ಜ್ಯೋತಿಷಿ ಮಾತನ್ನು ನಂಬಿ ಹಾವಿಗೆ ನಾಲಗೆಯನ್ನು ಕೊಡಲು ಹೋಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿ. ನಂತರ ಏನಾಯ್ತು?

ಗೊಬಿಚೆಟ್ಟಿಪಾಳ್ಯಂ ನಿವಾಸಿ 52 ವರ್ಷದ ವ್ಯಕ್ತಿ ಒಬ್ಬ ತನ್ನ ಕನಸನ್ನು ನನಸು ಮಾಡಲು ಹೋಗಿ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ವ್ಯಕ್ತಿಗೆ ಪ್ರತಿದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಕನಸಿನಲ್ಲಿ ಹಾವು ಕಚ್ಚಿದಂತೆಯೇ ಕಂಡು ಬೆಚ್ಚಿ ಬೀಳುತ್ತಿದ್ದನಂತೆ. ನಾಗರ ದೋಷವಿರಬಹುದು ಎಂದು ಪರಿಗಣಿಸಿ, ವ್ಯಕ್ತಿಯು ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿಯಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದನಂತೆ.

ಈ ಕನಸಿಗೆ ಪರಿಹಾರಾರ್ಥವಾಗಿ ಜ್ಯೋತಿಷಿಗಳು ಹಾವಿನ ಪೂಜೆಯನ್ನು ನೆರವೇರಿಸುವಂತೆ ಹೇಳಿದ್ದಾರಂತೆ. ಅಲ್ಲದೆ ಈತನ ಪೂಜೆಗೊಲಿದ ಹಾವು ಹುತ್ತದಿಂದ ಹೊರ ಬಂದಾಗ ವ್ಯಕ್ತಿಯು ತನ್ನ ನಾಲಿಗೆಯನ್ನು ಸುಳಿದು ಹಾವಿಗೆ ತೋರುವಂತೆ ಸಲಹೆ ನೀಡಿದ್ದರಂತೆ. ಜ್ಯೋತಿಷಿಗಳು ಹೇಳಿದ ಪ್ರಕಾರವೇ ಪೂಜೆ ಮಾಡಿದ ವ್ಯಕ್ತಿಯು ಹಾವು ಕಂಡಾಗ ತನ್ನ ನಾಲಿಗೆಯನ್ನು ಅದರ ಎದುರು ಸುಳಿದಿದ್ದಾನೆ.

ಈತನನ್ನು ಕಂಡು ಸಿಟ್ಟಿಗೆದ್ದ ಹಾವು ಈತನ ನಾಲಿಗೆಯನ್ನು ಕಚ್ಚಿದೆ. ನೋವಿನಿಂದ ವ್ಯಕ್ತಿಯು ಕೂಸಿದು ಬಿದ್ದಾಗ ಹತ್ತಿರದಲ್ಲೇ ಇದ್ದ ಆತನ ಸಂಬಂಧಿ ಹಾಗೂ ಕುಟುಂಬದವರೆಲ್ಲರೂ ಸೇರಿ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರಂತೆ. ವಿಷವು ಪೂರ್ತಿಯಾಗಿ ಏರದಂತೆ ಮಾಡಲು ನಾಲಿಗೆಯನ್ನು ಕತ್ತರಿಸಬೇಕಾದ ಪರಿಸ್ಥಿತಿ ಬಂದೊದಗಿ, ವ್ಯಕ್ತಿಯು ನಾಲಿಗೆಯನ್ನು ಕಳೆದುಕೊಂಡನು.

ಈ ಬಗ್ಗೆ ಮಾತನಾಡಿದ ಈರೋಡ್ ಮನಿಯನ್ ಮೆಡಿಕಲ್ ಆಸ್ಪತ್ರೆಯ ಮುಖ್ಯಸ್ಥ, ಡಾಕ್ಟರ್ ಎಸ್. ಸೆಂಥಿಲ್ ಕುಮಾರನ್, ‘ನವಂಬರ್ 18 ರಂದು ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಕುಟುಂಬದವರು ಆಸ್ಪತ್ರೆಗೆ ಕರೆತಂದಿದ್ದರು. ಹಾವು ಕಚ್ಚಿದ ಕಾರಣದಿಂದ ಆತನ ಬಾಯಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಹಾವಿನ ವಿಷದಿಂದಾಗಿ ಆತನ ನಾಲಗೆಯ ಅಂಗಾಂಶಕ್ಕೆ ಭಾರಿ ಹಾನಿಯಾಗಿತ್ತು. ಹೀಗಾಗಿ ಆತನ ಜೀವ ಉಳಿಸುವುದರ ಸಲುವಾಗಿ ನಾವು ನಾಲಗೆಯನ್ನು ಕತ್ತರಿಸಿ ಬೇರ್ಪಡಿಸಬೇಕಾಯಿತು.ನಾಲಗೆಯನ್ನು ಕತ್ತರಿಸಿ ತೆಗೆದ ಬಳಿಕವೂ ವ್ಯಕ್ತಿಯ ಜೀವ ಉಳಿಸಲು ಸುಮಾರು ನಾಲ್ಕು ದಿನಗಳ ಕಾಲ ನಾನು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದೇವೆ’ ಎಂದಿದ್ದಾರೆ. ಹಾವು ಕಚ್ಚಿದಂತೆ ಬೀಳುತ್ತಿದ್ದ ಕನಸನ್ನು ವ್ಯಕ್ತಿಯೂ ತಾನಾಗಿಯೇ ಹೋಗಿ ನನಸು ಮಾಡಿಕೊಂಡಂತಾಗಿದೆ. ಕನಸಿಗಾಗಿ ಪರಿಹಾರ ಹುಡುಕಿಕೊಂಡು ಹೋಗಿ ನಾಲಿಗೆ ಕಳೆದುಕೊಂಡ ವಿಚಿತ್ರ ಘಟನೆಗೆ ತಮಿಳುನಾಡು ಸಾಕ್ಷಿಯಾಗಿದೆ.

Leave a Comment

error: Content is protected !!