ಬಿಕಾಂ ಪದವಿ ಪಡೆದ ನಂತರ ಎಮ್ಮೆ ಸಾಕಿ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಗಳಿಸುತ್ತಿರುವ ಯುವಕ

ತುಂಬಾ ಜನ ಪದವೀಧರರು ಓದು ಮುಗಿಸಿ, ಉದ್ಯೋಗಕ್ಕಾಗಿ ಅಲೆದಾಡಿ ಮನೆಯಲ್ಲಿ ಕುಳಿತಿರುತ್ತಾರೆ. ಭಾರತದಲ್ಲಿ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಪಾಲಕರ ವ್ಯವಸಾಯಭೂಮಿಯಿದ್ದಲ್ಲಿ, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಮಂದಿಯೂ ಇದ್ದಾರೆ. ಉದ್ಯೋಗ ಸಿಗದ ಬಹಳಷ್ಟು ಮಂದಿ ಮಾನಸಿಕ ನೆಮ್ಮದಿ ಇಲ್ಲದೆ ತೊಳಲಾಡುತ್ತಾ ಇರುತ್ತಾರೆ. ಇನ್ನು ಕೆಲವು ಮಂದಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಜುಗರಪಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ಹೈನುಗಾರಿಕೆಯಿಂದಲೇ ಹಣವನ್ನು ಗಳಿಸುತ್ತಿದ್ದಾರೆ.

ಖಟಕಚಿಂಚೋಳಿ ಸಮೀಪದ ಉಚ್ಚ ಗ್ರಾಮದ ಪದವೀಧರರಾದ ಅಮರಸ್ವಾಮಿ ಎನ್ನುವರು ವ್ಯವಸಾಯದೊಂದಿಗೆ ಹೈನುಗಾರಿಕೆಯನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಇವರು ಬಿಕಾಂ ಪದವಿಯನ್ನು ಹೊಂದಿದ್ದಾರೆ. ಪದವಿ ಮುಗಿಯುತ್ತಿದ್ದಂತಲೇ ಮಹಾಮಾರಿ ಕರೋನದಿಂದ ಇಡೀ ಭಾರತವೇ ಲಾಕ್ ಡೌನ್ ಆಗಿತ್ತು. ಇವರ ಅಲೆದಾಟವು ಯಾವುದೇ ಉದ್ಯೋಗವನ್ನು ಹಿಡಿಸಿಕೊಡಲಿಲ್ಲ.ಆದರೆ ಇದರಿಂದ ಧೃತಿಗೆಡದೆ ಹೈನುಗಾರಿಕೆ ಕೆಲಸವನ್ನು ಮಾಡಿ ಕೈ ತುಂಬಾ ಹಣವನ್ನು ಗಳಿಸಿದ್ದಾರೆ.

ರೈತ ಕುಟುಂಬದ ಇವರನ್ನು ಗುರುತಿಸಿ ಮಾತನಾಡಿಸಿದಾಗ ‘ಪ್ರಾರಂಭದಲ್ಲಿ ಒಂದು ಎಮ್ಮೆಯಿಂದ ಹೈನುಗಾರಿಕೆಯನ್ನು ಶುರುಮಾಡಿದೆ. ಈಗ 6 ಎಮ್ಮೆ ಮತ್ತು 2 ಕರುಗಳಿವೆ. ಪ್ರತಿದಿನ 30 ರಿಂದ 35 ಲೀಟರ್ ಹಾಲು ಸಂಗ್ರಹಿಸಿ, ಲೀಟರ್ಗೆ 60 ರೂಪಾಯಿನಂತೆ ಮಾರಾಟ ಮಾಡುತ್ತೇನೆ. ಇದರಿಂದ ಪ್ರತಿ ತಿಂಗಳಿಗೆ ಹುಲ್ಲು, ದಾಣಿ, ಹಿಂಡಿ ಇವೆಲ್ಲದರ ಖರ್ಚು ವೆಚ್ಚವನ್ನು ಹೊರತುಪಡಿಸಿಯು 30 ರಿಂದ 35000 ಗಳಿಕೆ ಆಗುತ್ತದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಸುಕರುಗಳನ್ನು ಸಾಕಿ ದೊಡ್ಡ ಪ್ರಮಾಣದ ಸ್ವಂತ ಹಾಲಿನ ಡೈರಿಯೊಂದನ್ನು ತೆರೆಯಬೇಕು ಎಂಬ ಆಸೆಯನ್ನು ಹೊಂದಿದ್ದೇನೆ’ ಎಂದಿದ್ದಾರೆ. ಅಲ್ಲದೆ, ‘ಅವುಗಳಿಗಾಗಿ ಸುಮಾರು ಅರ್ಧ ಎಕರೆ ಜಾಗದಲ್ಲಿ ಹುಲ್ಲನ್ನು ಬೆಳೆಯುತ್ತೇನೆ. ಪ್ರತಿದಿನವೂ ಹಸಿ ಹುಲ್ಲನ್ನು ತಿನಿಸುವುದರಿಂದ ಕೆನೆಭರಿತ ದಪ್ಪನಾದ ಹಾಲು ದೊರೆಯುತ್ತದೆ. ಪ್ರಾರಂಭದಲ್ಲಿ ಎರಡು ಹಸುಗಳ ಖರೀದಿ ಮತ್ತು ಹಸುಗಳ ರಕ್ಷಣೆಗಾಗಿ ಕೊಟ್ಟಿಗೆಯ ನಿರ್ಮಾಣ ಮಾಡಿ ಸುಮಾರು 1.5 ಲಕ್ಷ ಖರ್ಚು ಮಾಡಿದ್ದೇನೆ. ನಂತರ ಹಾಲು ಮಾರಿ ಬಂದ ಆದಾಯದಲ್ಲಿ ಉಳಿದ ಎಮ್ಮೆಗಳನ್ನು ಖರೀದಿಸಿದ್ದೇನೆ’ ಎಂದು ಅಮರ್ ತಿಳಿಸಿದ್ದಾರೆ.

ಉದ್ಯೋಗಕ್ಕಾಗಿ ಪರಿತಪಿಸಿ ದೊಡ್ಡ ದೊಡ್ಡ ಸಿಟಿ ಅತ್ತ ಮುಖ ಮಾಡಿ ಹೊರಡುವ ಯುವಕರಿಗೆ ಕೃಷಿಯಲ್ಲಿಯೂ ಒಳ್ಳೆಯ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿ ಉಚ್ಚ ಗ್ರಾಮದ ಪದವೀಧರ ಅಮರ್ ಸ್ವಾಮಿ ಸಾಕ್ಷಿಯಾಗಿದ್ದಾರೆ. ‘ನಿರುದ್ಯೋಗಿಗಳು ಅಮರ್ ನಂತೆ ಹೈನುಗಾರಿಕೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು’ ಎಂದು ಗ್ರಾಮದ ಶಾಂತಯ್ಯ ಸ್ವಾಮಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಅಮರವರು ಎಮ್ಮೆಗಳನ್ನು ಸಾಕಿ, ಹಾಲು ಮಾರಾಟ ಮಾಡಿ, ದೊರೆತ ಗೊಬ್ಬರದೊಂದಿಗೆ ಕೃಷಿಯನ್ನು ಮಾಡಿ, ಒಳ್ಳೆಯ ಆದಾಯ ಗಳಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

Leave a Comment

error: Content is protected !!