ಮುಖದ ಮೇಲಿನ ಕಪ್ಪು ಕಲೆ ಹೋಗಲಾಡಿಸಬೇಕೆ? ಇಲ್ಲಿದೆ ಸರಳ ಉಪಾಯ

ಮುಖದ ಅಂದ ಹೆಚ್ಚಿಸುವಲ್ಲಿ ಕಣ್ಣಿನ ಪಾತ್ರ ಮಹತ್ವವಾದದ್ದು. ಹೊಳೆಯುವ ಕಣ್ಣುಗಳು ನೋಡುಗರನ್ನು ಸೆಳೆಯುತ್ತದೆ. ಆದರೆ ಅದರ ಕೆಳಗಡೆ ಬೀಳುವ ಕಪ್ಪು ವರ್ತಲದಿಂದಾಗಿ ಮುಖವು ಮಂಕಾಗುವುದು. ಇದನ್ನು ಡಾರ್ಕ್‌ ಸರ್ಕಲ್ ಎನ್ನುತ್ತಾರೆ. ಈ ಡಾರ್ಕ್ ಸರ್ಕಲ್ ಒಮ್ಮೆ ಬಂದರೆ ಹೋಗಲು ಕೆಲವು ದಿನಗಳು ತೆಗೆದುಕೊಳ್ಳುತ್ತದೆ. ಈ ಸೌಂದರ್ಯ ಸಮಸ್ಯೆ ಪುರುಷ-ಮಹಿಳೆ ಎನ್ನದೆ ಎಲ್ಲರಿಗೂ ಕಾಡುತ್ತದೆ. ಗುಳ್ಳೆಗಳು, ಮೊಡವೆ, ಬೊಕ್ಕೆ, ಕಚ್ಚುಗಳಿಂದ ಕಪ್ಪು ಕಲೆಗಳು ಉಂಟಾಗುತ್ತವೆ. ಸೂರ್ಯನ ಶಾಕಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಲೂ ಕಪ್ಪು ಕಲೆಗಳು ಹೆಚ್ಚಾಗುತ್ತವೆ. ಇದನ್ನು ತಡೆಗಟ್ಟಲು ಆಚೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ಬಳಸಿ ಹಾಗೂ ಈ ಕೆಳಗಿನ ಮನೆ ಮದ್ದುಗಳ ಸಹಾಯದಿಂದ ಕಪ್ಪು ಕಲೆಗಳನ್ನು ಇಲ್ಲವಾಗಿಸಿ. ಯಾವ ಮನೆಮದ್ದಿನ ಮೂಲಕ ನಾವು ಇವುಗಳಿಗೆ ಮುಕ್ತಿ ಕೊಡಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮುಖ್ಯವಾಗಿ ನಮಗೆ ಈ ಮನೆಮದ್ದಿಗೆ ಬೇಕಿರುವುದು ಕಡಲೆ ಹಿಟ್ಟು , ಟೊಮೆಟೊ ಹಾಗೂ ಅಲೋವೆರಾ. ಭಾರತೀಯ ಸೌಂದರ್ಯ ಪರಿಹಾರ ವಿಧಾನಗಳಲ್ಲಿ ಕಡ್ಲೆಹಿಟ್ಟಿಗೆ ಪ್ರಮುಖ ಸ್ಥಾನವಿದೆ. ಇದರ ಬಿಳಿಚುಕಾರಕ ಗುಣಗಳೇ ಇದಕ್ಕೆ ಪ್ರಮುಖ ಕಾರಣ. ಶತಮಾನಗಳಿಂದ ಭಾರತೀಯ ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಕಡ್ಲೆಹಿಟ್ಟನ್ನು ಸೌಂದರ್ಯ ಕಾರಣಗಳಿಗಾಗಿ ಬಳಸುತ್ತಾ ಬಂದಿದ್ದಾರೆ. ತ್ವಚೆಯ ಕಾಂತಿ ಹೆಚ್ಚಿಸಲು, ಕಲೆಗಳನ್ನು ನಿವಾರಿಸಲು, ಕೋಮಲ ಮತ್ತು ತುಂಬಿಕೊಂಡ ತ್ವಚೆಯನ್ನು ಪಡೆಯುವುದು ಇದರಿಂದ ಸಾಧ್ಯವಾಗುತ್ತದೆ. ಅದರಲ್ಲೂ ಕಡ್ಲೆಹಿಟ್ಟಿನ ಸ್ವಚ್ಛಕಾರಕ ಗುಣ ಮತ್ತು ತ್ವಚೆಯ ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸುವುದು ಇದರ ಪ್ರಬಲ ಗುಣಗಳಲ್ಲಿ ಕೆಲವು. ಇತರ ಗುಣಗಳಲ್ಲಿ ಅತಿಸೂಕ್ಷ್ಮಜೀವಿ ನಿವಾರಕ ಮತ್ತು ತೇವಕಾರಕವೂ ಪ್ರಮುಖವಾಗಿದೆ. ಕಡ್ಲೆಹಿಟ್ಟು ಅಗ್ಗವಾಗಿದ್ದು ಎಲ್ಲೆಡೆ ಎಲ್ಲಾಕಾಲದಲ್ಲಿಯೂ ಲಭಿಸುವ ಸುಲಭ ಸಾಮಾಗ್ರಿಯಾಗಿದೆ. ಸಾಧ್ಯವಿದ್ದರೆ ಮನೆಯಲ್ಲಿಯೂ ಸುಲಭವಾಗಿ ತಯಾರಿಸಿಕೊಳ್ಳಬಹುದು. ತ್ವಚೆಯ ಬಗೆಯನ್ನು ಆಧರಿಸಿ ಕಡ್ಲೆಹಿಟ್ಟಿನೊಂದಿಗೆ ಬೆರೆಸುವ ಇತರ ಸಾಮಾಗ್ರಿಗಳು ಇದರ ಪ್ರಾಬಲ್ಯವನ್ನು ಹತ್ತಾರು ಬಗೆಗಳಲ್ಲಿ ವಿಸ್ತರಿಸುತ್ತವೆ. ಸರಳವಾಗಿ ಟೊಮೆಟೊ ರಸ ಹಾಗೂ ಅಲೋವೆರಾ ಬೆರೆಸಿ ತಯಾರಿಸಿದ ಮುಖಲೇಪ ಅಥವಾ ಇತರ ಸಾಮಗ್ರಿಗಳ ಮಿಶ್ರಣದ ಮುಖಲೇಪ, ಎಲ್ಲವೂ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಖಂಡಿತಾ ನೆರವಾಗುತ್ತವೆ.

ಇನ್ನು ಟೊಮೆಟೊ. ಟೊಮೆಟೊದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಒಳಗೊಂಡಿದೆ. ಇದರಲ್ಲಿ ಫೆನಾಲಿಕ್ ಅಂಶಗಳಾಗಿರುವಂತಹ ಕ್ಯಾರೋಟನಾಯ್ಡ್, ಫಾಲಿಕ್ ಆಮ್ಲ ಮತ್ತು ವಿಟಮಿನ್ ಸಿ ಇದೆ. ಇದು ಈ ರೀತಿಯಾಗಿ ನಮ್ಮ ಚರ್ಮಕ್ಕೆ ಲಾಭ ನೀಡಲಿದೆ. ಇದರಲ್ಲಿನ ಆಂಟಿಆಕ್ಸಿಡೆಂಟ್ ಮತ್ತು ಆಂಟಿಟ್ರೋಸಿನೇಸ್ ಗುಣಗಳು ಕಲೆಗಳ ಬಣ್ಣ ಮಾಸುವಂತೆ ಮಾಡುವುದು ಮತ್ತು ಚರ್ಮಕ್ಕೆ ಹಾನಿ ಆಗದಂತೆ ತಡೆಯುವುದು. ಇದನ್ನು ನೇರವಾಗಿ ಹಚ್ಚಿಕೊಂಡ ವೇಳೆ ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ನೆರಿಗೆ, ಗೆರೆಗಳು ಮತ್ತು ಚರ್ಮ ಜೋತು ಬೀಳುವ ಸಮಸ್ಯೆ ನಿವಾರಣೆ ಆಗುವುದು. ಇದರಲ್ಲಿ ಇರುವಂತಹ ಲೈಕೋಪೆನೆ ಎನ್ನುವ ಅಂಶವು ಮುಖಕ್ಕೆ ಆಗುವ ಹಾನಿ ತಡೆಯುವುದು. ವಿಟಮಿನ್ ಸಿ ಕಾಲಜನ್ ಉತ್ಪತ್ತಿ ಸುಧಾರಿಸುವುದು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು. ಇದರಿಂದ ಚರ್ಮವು ಬಿಗಿಯಾಗುವುದು. ಟೊಮೆಟೊದ ತಿರುಳಿನಲ್ಲಿ ಬ್ಯಾಕ್ಟೀರಿಯಾ ವಿರೋಧೀ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಇದು ಸಮತೋಲನದಲ್ಲಿ ಇಡುತ್ತದೆ. ಇದರಿಂದಾಗಿ ಚರ್ಮದಲ್ಲಿನ ನೈಸರ್ಗಿಕ ತೈಲದ ಉತ್ಪತ್ತಿ ಕೂಡ ಸಮತೋಲನದಲ್ಲಿ ಇಡುವುದು. ಚರ್ಮದ ಸತ್ತ ಕೋಶಗಳನ್ನು ಇದು ನಿವಾರಿಸುವುದು ಮತ್ತು ರಂಧ್ರಗಳನ್ನು ಬಿಗಿಯಾಗಿಸುವುದು. ಈ ಎಲ್ಲಾ ಲಾಭಗಳನ್ನು ನೀಡುವ ಟೊಮೆಟೊವು ವಿವಿಧ ರೀತಿಯ ಚರ್ಮಗಳಲ್ಲಿ ಕಂಡು ಬರುವಂತಹ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಇನ್ನು ಕೊನೆಯದಾಗಿ ಅಲೋವೆರಾ. ಅಲೋವೆರಾ ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಹದ ಚರ್ಮಕ್ಕೆ ಮತ್ತು ಕೂದಲಿಗೆ ಬಹಳಷ್ಟು ಪ್ರಯೋಜನಗಳನ್ನು ಉಂಟು ಮಾಡುತ್ತದೆ. ಅದರಲ್ಲೂ ಚರ್ಮದ ಅನೇಕ ಸಮಸ್ಯೆಗಳಿಗೆ ಅಲೋವೆರಾ ಒಳ್ಳೆಯ ಔಷಧಿ ಎಂದು ನಂಬಲಾಗಿದೆ. ನಿಮ್ಮ ಮುಖದ ಚರ್ಮದ ಮೇಲೆ ಮೂಡಿ ಬಂದ ಮೊಡವೆಗಳು, ಗುಳ್ಳೆಗಳು ಹಾಗೂ ಕಲೆಗಳಿಗೆ ಅಲೋವೆರಾ ಮುಕ್ತಿ ಕೊಡುತ್ತದೆ. ಅಲೋವೆರಾದಿಂದ ಜೆಲ್ ತಯಾರಿಸಿಕೊಂಡು ಪ್ರತಿ ದಿನ ಒಮ್ಮೆ ಮುಖಕ್ಕೆ ಹಚ್ಚಿದರೆ ಸಾಕು. ಅಲೋವೆರಾದ ಜೊತೆ ಸ್ವಲ್ಪ ಅರಿಶಿಣ ಪುಡಿ ಮಿಶ್ರಣ ಮಾಡಿ ನಿಮ್ಮ ಮುಖದ ತುಂಬಾ ಮಸಾಜ್ ಮಾಡುತ್ತ ಬಂದರೆ ನಿಮಗೆ ಸಿಗುವ ಪ್ರಯೋಜನಗಳು ದುಪ್ಪಟ್ಟಾಗುತ್ತದೆ. ಅಲೋವೆರಾ ಮತ್ತು ಅರಿಶಿನ ಪುಡಿಯ ಪೇಸ್ಟ್ ಅನ್ನು ಸ್ವಲ್ಪ ಹೊತ್ತು ಒಣಗಲು ಬಿಟ್ಟು ನಂತರ ಶುಚಿಯಾದ ನೀರಿನ ಮುಖ ತೊಳೆದುಕೊಳ್ಳುವುದು ರೂಢಿ ಮಾಡಿಕೊಳ್ಳಿ.

ಇನ್ನು ಮೇಲೆ ತಿಳಿಸಿದೆ ಈ ಮೂರು ವಸ್ತುಗಳನ್ನು ನಾವು ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ , ಒಂದು ಬೌಲ್ ನಲ್ಲಿ ಒಂದು ಚಮಚದಷ್ಟು ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಹಾಗೂ ಪೇಸ್ಟ್ ಮಾಡಿಕೊಳ್ಳಲು ಬೇಕಾದಷ್ಟು ಟೊಮೇಟೊ ಹಣ್ಣಿನ ರಸವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಾಗೂ ಗುತ್ತಿಗೆಯ ಭಾಗಕ್ಕೂ ಕೂಡ ಹಚ್ಚಿಕೊಳ್ಳಬಹುದು. ಹಚ್ಚಿಕೊಂಡ ನಂತರ ಒಣಗುವವರೆಗೂ ಹಾಗೆಯೇ ಬಿಟ್ಟು ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಕಡಲೆಹಿಟ್ಟು ಟೊಮೇಟೊ ಹಾಗೂ ಅಲೋವೆರಾ ಪೇಸ್ಟ್ ಇದನ್ನು ಪ್ರತಿದಿನವೂ ಮಾಡಬಹುದು. ಪ್ರತೀ ದಿನ ಆಗದೇ ಇದ್ದರೂ ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಮಾಡುವುದರಿಂದ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳು , ಡಾರ್ಕ್ ಸರ್ಕಲ್ , ಮೊಡವೆ ಇವುಗಳೆಲ್ಲ ಮಾಯವಾಗುತ್ತದೆ ಹಾಗೂ ಚರ್ಮ ಹೊಳಪನ್ನು ಪಡೆದುಕೊಳ್ಳುತ್ತದೆ.

Leave a Comment

error: Content is protected !!