ಕಾಂತಾರ ಚಿತ್ರದ ಯಶಸ್ಸಿನ ಜೊತೆಗೆ ಇನ್ನೊಂದು ಸಿಹಿ ಸುದ್ದಿ ಹಂಚಿಕೊಂಡ ರಿಷಬ್ ಶೆಟ್ಟಿ ಮತ್ತು ದಂಪತಿ

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದ ಚಿತ್ರಗಳು ದಾಖಲೆಗಳನ್ನೇ ಸೃಷ್ಟಿಸಿವೆ. ಸಾಲು ಸಾಲು ಚಿತ್ರಗಳು ಭಾರತದಾದ್ಯಂತ ಸಿನಿಪ್ರಿಯರನ್ನು ಮೆಚ್ಚಿಸಿ, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಗಳು ಕನ್ನಡದತ್ತ ತಲೆಯೆತ್ತಿ ನೋಡುವಂತೆ ಮಾಡಿವೆ. ಕನ್ನಡಿಗರಂತೂ ಒಂದರ ಹಿಂದೊಂದು ತೆರೆಕಾಣುತ್ತಿರುವ ವಿಭಿನ್ನ, ವಿಶೇಷ ಚಿತ್ರಗಳಿಂದ ಹೆಮ್ಮೆಯಿಂದ ಬೀಗುತ್ತಿದ್ದಾರೆ.

ತೋತಾಪುರಿ, ಗುರು ಶಿಷ್ಯರು, ಕಾಂತಾರ ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಿದ್ದು ಒಳ್ಳೆಯ ಪ್ರೋತ್ಸಾಹ ದೊರಕಿ ಸಕ್ಸಸ್ ಆಗಿದೆ. ಕಾಂತಾರ ಚಿತ್ರವು ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿಯುವಂತಿದೆ. ಕರಾವಳಿ ಜನರ ಆಚರಣೆಗಳನ್ನು ದೇಶಕ್ಕೆ ಸಾರಿದ ವಿಶಿಷ್ಟ ಚಿತ್ರವಿದು. ನಟನೆಗೆ ನೈಜತೆಯ ಬಣ್ಣ ತುಂಬಿ, ದೈವದ ಭಕ್ತಿ ತುಂಬಿ, ರಂಗು ರಂಗಾಗಿ ಮೂಡಿಬಂದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಟನೆಗೆ ಸರಿಸಾಟಿಯಾಗಿ ನಿಲ್ಲುವವರಾರಿದ್ದಾರೆ? ಎನಿಸಿಬಿಡುವುದು. ಸಂಸ್ಕೃತಿಯನ್ನು ಯಥಾವತ್ತಾಗಿ ಬಿಂಬಿಸಿದ ಈ ಚಿತ್ರದ ಮೂಲಕ ರಿಷಬ್ ಶೆಟ್ಟಿಯವರಿಗೆ ಅಭಿಮಾನಿ ಬಳಗದ ಮನದಲ್ಲಿ ಮೊದಲಿಗಿಂತ ಎತ್ತರದ ಸ್ಥಾನ ದೊರಕಿದೆ. ಬೇರೆ ಭಾಷೆಗೆ ಡಬ್ಬಾಗದೆ ಕೇವಲ ಕನ್ನಡವೊಂದರಲ್ಲೇ ಅತಿ ಕಡಿಮೆ ದಿನಗಳಲ್ಲಿ 50 ಕೋಟಿ ಲಾಭಗಳಿಸಿದ ಕಾಂತಾರವು ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ದಾಖಲೆ ನಿರ್ಮಿಸಿಕೊಂಡಿದೆ.

ಕಿರಿಕ್ ಪಾರ್ಟಿ ಸಿನಿಮಾದ ಪ್ರಚಾರ ಸಮಯದಲ್ಲಿ ಗೆಳತಿಯಾದ ಪ್ರಗತಿಯವರೊಂದಿಗೆ ಮದುವೆಯಾದ ರಿಷಬ್ ಶೆಟ್ಟಿ ಅವರಿಗೆ ರಣವಿತ್ ಶೆಟ್ಟಿ ಎಂಬ ಪುಟ್ಟ ಗಂಡು ಮಗುವಿದ್ದಾನೆ. ‘ಹೊಸವರ್ಷಕ್ಕೆ ರಣವಿತ್ ಅಣ್ಣನಾಗಲಿದ್ದಾನೆ.ನಮ್ಮ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ’ ಎಂದ ಈ ಜೋಡಿಗೆ ಮಾರ್ಚ್ ನಾಲ್ಕರಂದು ಹೆಣ್ಣು ಮಗು ಜನಿಸಿದ್ದು, ಮಹಾಲಕ್ಷ್ಮಿ ಮನೆಗೆ ಬಂದಂತಾಗಿದೆ. ‘ತಾಯಿಯಷ್ಟೇ ಸುಂದರವಾಗಿದ್ದಾಳೆ ಮಗಳು’ ಎಂದು ಫೋಟೋ ಶೇರ್ ಮಾಡಿದ ರಿಷಬ್ ಶೆಟ್ಟಿ ‘ತಾಯಿ ಮತ್ತು ಮಗಳು ಆರೋಗ್ಯದಿಂದಿದ್ದಾರೆ’ ಎಂದಿದ್ದರು. ಏಳು ತಿಂಗಳ ನಂತರ ಇದೀಗ ಕಾಂತಾರದ ಯಶಸ್ಸಿನ ಬೆನ್ನೆಲೆ ತಮ್ಮ ಮುದ್ದು ಮಗಳಿಗೆ ‘ರಾಧ್ಯಾ’ ಎಂಬ ವಿಶೇಷವಾದ ಹೆಸರನ್ನಿಟ್ಟಿದ್ದಾರೆ.

”ಎಲ್ಲರಿಗೂ ನವರಾತ್ರಿಯ ಶುಭಾಶಯಗಳು.. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು.. ನಾಡಿನ ಜನರ ಪ್ರೀತಿ.. ಮತ್ತಷ್ಟು ಸಂಭ್ರಮವನ್ನು ತಂದಿವೆ.. ಇದಕ್ಕೆ ಕಲಶಪ್ರಾಯವಾಗಿ ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ.. ಮಗಳಿಗೆ ನಿಮ್ಮೆಲ್ಲರ ಹಾರೈಕೆಗಳಿರಲಿ” ಎಂದು ಬರೆದು ಪೋಸ್ಟ್ ಮಾಡಿರುವ ಫೋಟೋಗೆ ಬಹಳ ಲೈಕ್ಸ್ ಬಂದಿದೆ. ಹೀಗೆ ಇವರ ಜೋಡಿ ಖುಷಿಯಾಗಿರಲಿ ಮತ್ತು ರಿಷಬ್ ಶೆಟ್ಟಿ ಅವರು ಹೊಸ ದಾಖಲೆಗಳನ್ನು ಬರೆವ ವಿಶೇಷ ಚಿತ್ರಗಳೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರಂತೆ.

Leave a Comment

error: Content is protected !!