ನನಗೆ ಪ್ರತಿ ತಿಂಗಳು ಸಂಬಳ ಕೊಟ್ಟು ನನ್ನನ್ನು ತಮ್ಮನಂತೆ ನೋಡುತ್ತಿದ್ದರು ಎನ್ನುತ್ತಾ ಭಾವುಕರಾದ ಅಪ್ಪು ಸಮಾಧಿಯ ಮೇಲ್ವಿಚಾರಕ…

ಕುಟುಂಬಸ್ಥರು, ಸಂಬಂಧಿಕರು, ಜೊತೆಯಲ್ಲಿ ಕೆಲಸ ಮಾಡಿದವರು, ಬಡವರು ಪುನೀತ್ ರಾಜಕುಮಾರ್ ಅವರು ಮಾಡಿದ ಸಹಾಯವನ್ನು ನೆನೆದು ಮಾತನಾಡಿದ್ದಾರೆ. ಪುನೀತ್ ಅವರ ಜೊತೆಯಲ್ಲಿ ಸದಾ ಇರುತ್ತಿದ್ದ ಅವರ ಬಾಡಿಗಾರ್ಡ ಚಲಪತಿಯವರು ಕೂಡ ‘ಅಪ್ಪು ಅವರಿಲ್ಲದೆ ಏನು ಇಲ್ಲ; ಅವರ ಅಭಿಮಾನಿಗಳು ಭಾವಚಿತ್ರದ ಮುಂದೆ ಇಂದಿಗೂ ಸಂಭ್ರಮಿಸುವುದನ್ನು ಕಂಡಾಗ ಅವರಿನ್ನು ಬದುಕಿರಬೇಕಿತ್ತು ಎಂದೆನಿಸುತ್ತದೆ’ ಎನ್ನುತ್ತಾ ಭಾವುಕರಾಗಿ ನುಡಿದಿದ್ದನ್ನು ನಾವೆಲ್ಲ ಕೇಳಿದ್ದೇವೆ. ಇದೀಗ ಅವರ ಸಮಾಧಿಯ ಬಳಿ ನೋಡಿಕೊಳ್ಳುತ್ತಿದ್ದ ಮೇಲ್ವಿಚಾರಕರಾದ ಲಕ್ಷ್ಮಿಪತಿಯವರು ಮಾತನಾಡಿದ್ದಾರೆ.

15 ವರ್ಷದಿಂದ ಸಮಾಧಿಯ ಬಳಿ ಕೆಲಸ ಮಾಡಿದ ಮೇಲ್ವಿಚಾರಕರಾದ ಲಕ್ಷ್ಮಿಪತಿಯವರಲ್ಲಿ ಸಂದರ್ಶನಕಾರರೊಬ್ಬರು ಅಭಿಪ್ರಾಯವನ್ನು ಕೇಳಿದಾಗ “ಪುನೀತ್ ಅವರು ಎಂದಿಗೂ ಯಾರನ್ನು ಕೀಳಾಗಿ ನೋಡಿದವರಲ್ಲ. ನಾನು ಡಾಕ್ಟರ್ ರಾಜಕುಮಾರ್ ಅವರು ತೀರಿಕೊಂಡಾಗಲೇ ಅವರ ಸಮಾಧಿಯನ್ನು ನೋಡಿಕೊಳ್ಳಲು ಇಲ್ಲಿಗೆ ಬಂದೆ. ಅಂದಿನಿಂದ ಇಂದಿನವರೆಗೂ ಇಲ್ಲಿಯೇ ಕೆಲಸ ಮಾಡುತ್ತಿರುತ್ತೇನೆ. ಅಪ್ಪು ಅವರು ಸಮಾಧಿಯ ಬಳಿ ಬರುತ್ತಿದ್ದರು. ಬೆನ್ನು ತಟ್ಟಿ ನನ್ನನ್ನು ನಗು ನಗುತ್ತಾ ಮಾತನಾಡಿಸುತ್ತಿದ್ದರು.

ನನಗೆ ತಿಂಗಳಿಗೊಮ್ಮೆ ಸಂಬಳವನ್ನು ನೀಡುತ್ತಿದ್ದರು. ಅಲ್ಲದೆ ವರ್ಷಕ್ಕೊಮ್ಮೆ ಹೊಸ ಬಟ್ಟೆಯನ್ನು ಕೊಡಿಸುತ್ತಿದ್ದರು. ಇಷ್ಟೇ ಅಲ್ಲದೆ ನಾನು ಊರಿಗೆ ಹೋಗಬೇಕೆಂದಿರುವೆ ಎಂದಾಗ ಆರಾಮಾಗಿ ಹೋಗಿ ಬಾ ಎಂದು ರಜೆಯನ್ನು ನೀಡುತ್ತಿದ್ದರು. ಊರಿನಲ್ಲಿ ಹಲವಾರು ಖರ್ಚುಗಳು ಇರುತ್ತವೆ ಎಂದು ಕೈಯಲ್ಲಿ ಹಣ ಇಟ್ಟು ಕಳುಹಿಸಿಕೊಡುತ್ತಿದ್ದರು” ಎಂದಿದ್ದಾರೆ.

ಅಲ್ಲದೆ “ನನ್ನನ್ನು ಅವರು ಸ್ವಂತ ತಮ್ಮನಂತೆ ನೋಡುತ್ತಿದ್ದರು. ನನ್ನ ಆರೋಗ್ಯವು ಹದಗೆಟ್ಟು ಕಂಗಲಾಗಿ ಕುಳಿತಾಗ ಆಸ್ಪತ್ರೆಯ ಖರ್ಚನ್ನು ಅವರೇ ವಹಿಸಿಕೊಳ್ಳುತ್ತಿದ್ದರು. ನನ್ನ ಸಂಬಂಧಿಗಳು ನನ್ನನ್ನು ಇಷ್ಟು ಒಳ್ಳೆಯದಾಗಿ ನೋಡಿಲ್ಲ; ಅಪ್ಪು ಅವರು ನನ್ನನ್ನು ಅಷ್ಟು ಚೆನ್ನಾಗಿ ನೋಡಿಕೊಂಡಿದ್ದರು. ಅವರು ಇಲ್ಲಿಗೆ ಬಂದಾಗೆಲ್ಲ ನನ್ನ ಯೋಗ ಕ್ಷೇಮವನ್ನು ವಿಚಾರಿಸಿ, ಹೋಗುವಾಗ ‘ಹುಷಾರಾಗಿರು ನಿನ್ನ ಮನೆಯಲ್ಲಿ ಎಲ್ಲರೂ ನಿನ್ನನ್ನೇ ನಂಬಿ ಬದುಕುತ್ತಿದ್ದಾರೆ. ಮಳೆ ಗಾಳಿ ಚಳಿಯಿಂದ ನಿನ್ನನ್ನು ನೀನು ರಕ್ಷಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕು’ ಎಂದು ಬುದ್ಧಿವಾದ ಹೇಳಿದ್ದರು” ಎಂದು ಮೇಲ್ವಿಚಾರಕರು ಹೇಳಿದ್ದಾರೆ.

“ಅಪ್ಪು ಅವರು ಸಾಯಲು ಒಂದು ವಾರದ ಮುಂಚೆ ಇಲ್ಲಿಗೆ ಬಂದಿದ್ದರು. ಕನ್ನಡ ರಾಜ್ಯೋತ್ಸವವನ್ನು ನಾನು ಆಚರಿಸಬೇಕೆಂದು ಹೇಳಿದ್ದೆ. ಅದಕ್ಕಾಗಿ ಅವರು ಹಣವನ್ನು ನೀಡಿ ‘ಚೆನ್ನಾಗಿ ಆಚರಿಸು ರಾಘಣ್ಣ ಅಥವಾ ಶಿವಣ್ಣನನ್ನು ಕರೆಸಿ ಕರ್ನಾಟಕದ ಧ್ವಜವನ್ನು ಹಾರಿಸು’ ಎಂದಿದ್ದರು …ಇಂಥ ಪುಣ್ಯಾತ್ಮರು ನಮ್ಮ ನಾಡಿನಲ್ಲಿ ಮತ್ತೆ ಮತ್ತೆ ಜನಿಸಬೇಕು” ಎಂದು ಪುನೀತ್ ರಾಜಕುಮಾರ್ ಅವರನ್ನು ನೆನೆದು ಸಮಾಧಿಯ ಬಳಿ ಕೆಲಸ ಮಾಡುವ ಮೇಲ್ವಿಚಾರಕರಾದ ಲಕ್ಷ್ಮಿಪತಿಯವರು ಕಣ್ಣೀರಿಟ್ಟಿದ್ದಾರೆ.

Leave a Comment

error: Content is protected !!