ಜಗ್ಗೇಶ್ ಪುತ್ರನ, ಕಾರು ಅಪಘಾತಕ್ಕೆ ನಿಜವಾದ ಕಾರಣವೇನು ಗೊತ್ತಾ? ಮೊದಲ ಬಾರಿಗೆ ಮಗನ ಆಕ್ಸಿಡೆಂಟ್ ಕುರಿತು ಮಾತನಾಡಿದ ಜಗ್ಗೇಶ್!

2021 ರಲ್ಲಿ ಜಗ್ಗೇಶ್ ಅವರ ಪುತ್ರ ಯತಿರಾಜ್ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪಘಾತವಾಗಿತ್ತು. ಅದೃಷ್ಟವಶಾತ್ ಯತಿರಾಜ್ ಅವರು ಪ್ರಾಣಪಾಯದಿಂದ ಪಾರಾಗಿದ್ದರು. ಈವರೆಗೂ ಮಗನ ಕಾರು ಅಪಘಾತದ ಕುರಿತಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳದ ನವರಸ ನಾಯಕ ಜಗ್ಗೇಶ್ ಅವರು, ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಅಪಘಾತವಾಗಿರಲು ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಜಗ್ಗೇಶ್ ಅವರು ಕಾಲಭೈರವನ ದೇವಸ್ಥಾನದ ಕುರಿತಾಗಿ ಮಾತನಾಡುತ್ತಾ “ಕಾಲಭೈರವರಿಗಾಗಿ ನಾನು ಸ್ವಂತ ಖರ್ಚಿನಲ್ಲಿ ಗುಡಿಯನ್ನು ಕಟ್ಟಿ, ಹೊಸ ಕಳೆಯನ್ನು ತುಂಬಿದಾಗ ನನಗೆ ಬಹಳ ಸಂತೋಷವಾಯಿತು; ಕಣ್ತುಂಬಿ ಬಂತು. ಯಾಕೆಂದರೆ ವಂಶಸ್ಥರೆಲ್ಲರೂ ಪೂಜಿಸಿಕೊಂಡೆ ಬಂದಿದ್ದ ಜಾಗವಾಗಿತ್ತು ಅದು. ಈ ಜನ್ಮ ಮುಗಿಸಿ ಭೂಮಿಯಿಂದ ಹೊರಟು ಹೋದಾಗಲೂ ಈ ವಂಶದವರು ಇಂತಹ ಕಾರ್ಯವನ್ನು ಮಾಡಿದ್ದಾರೆ ಎಂಬ ನೆನಪು ಉಳಿಯುತ್ತದೆ. ಇಂತಹ ಒಂದು ದೇವಸ್ಥಾನವನ್ನು ನಿರ್ಮಿಸುವಾಗ ಏಳು ವರ್ಷಗಳ ಕಾಲ ನನ್ನ ತಮ್ಮ ಹೆಮ್ಮೆಯಿಂದ ಕಾಲಭೈರವರ ಅನುಷ್ಠಾನಗಳನ್ನು ಪಾಲಿಸುತ್ತಾ ನಿಂತಿದ್ದ” ಎಂದು ಹೇಳಿದರು.

ಅದೇ ವೇಳೆಯಲ್ಲಿ ಮಗನ ಕಾರು ಅಪಘಾತವಾದ ದಿನದ ಕುರಿತಾಗಿ ಜಗ್ಗೇಶ್ ಅವರು ಮಾತನಾಡಿದರು. “ನನ್ನ ಮಗನಿಗೆ ನಾನು ಹೇಳಿದ್ದೆ; ನಿನಗೆ ಕುಜ ದಶೆಯಲ್ಲಿ ರಾಹು ಭುಕ್ತಿಯು ನಡೆಯುತ್ತಿದೆ. ಮೂರು ವರ್ಷಗಳ ಕಾಲ ನೀನು ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ. ಅದಕ್ಕವನು ನನ್ನ ಮೇಲೆ ಕೋಪಗೊಂಡಿದ್ದ. ಕಾರು ಅಪಘಾತದ ದಿನ ನಾನು ಅವನಲ್ಲಿ, ‘ಇಂದು ನನ್ನ ಮನಸ್ಸು ಒಪ್ಪುತ್ತಿಲ್ಲ; ನೀನು ಆಚೆ ಹೋಗಬೇಡ’ ಎಂದಿದ್ದೆ. ‘ಏನೋ ನನ್ನನ್ನು ಕಾಡ್ತಿದೆ ನೀನು ಹೋಗ್ಬೇಡ’ ಎಂದಿದ್ದೆ. ಆದರೆ ಅವನು ಸಿಟ್ಟಾಗಿದ್ದ. ‘ನೀವು ಹಳೆ ಕಾಲದವರ ಹಾಗೆ ಮಾತಾಡ್ತಿದ್ದೀರಿ; ನಾವೆಲ್ಲ ಸೈಂಟಿಫಿಕ್ ಆಗಿ ಯೋಚಿಸಬೇಕು’ ಎಂದು ನನಗೆ ಹೇಳಿ ಹೊರಟಿದ್ದ”.

“ಕರೋನಾ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಆಚೆ ಈಚೆ ಹೋಗದೆ ಕಟ್ಟು ನಿಟ್ಟಾಗಿ ನಿಯಮ ಪಾಲಿಸುತ್ತಾ, ಮನೆಯಲ್ಲೇ ಇದ್ದ. ಆದರೆ ಅದೊಂದು ದಿನ ನನ್ನ ಮಾತು ಕೇಳದೆ, ಹೆಂಡತಿಗೂ ಹೇಳದೆ ಕಾರು ತೆಗೆದುಕೊಂಡು ಹೊರಟಿದ್ದ. ಅದಾದಮೇಲೆ ಮಹಾ ಗಂಡಾಂತರವೇ ಎದುರಾಯಿತು. ಆದರೆ ನನ್ನ ಮಗ ಯತಿರಾಜ್ ಸಾವನ್ನೇ ಗೆದ್ದು ಬಂದಿದ್ದ. ಅಂದು ಅವನನ್ನು ಕಾಪಾಡಿದವರು ರಾಯರು. ರಾಯರ ಕೃಪೆ ಇಲ್ಲದಿದ್ದಲ್ಲಿ ಏನಾಗುತ್ತಿತ್ತೋ ಏನೋ? ಆದರೆ ರಾಯರು ಕೈ ಬಿಡಲಿಲ್ಲ. ಆ ಅಪಘಾತದ ನಂತರ ಆ ಕಾರನ್ನು ತೂಕಕ್ಕೆ ಹಾಕಿದ್ವಿ. ಮತ್ತೆ ಅದನ್ನು ಉಪಯೋಗಿಸಲಿಲ್ಲ” ಎಂದು ಜಗ್ಗೇಶ್ ಅವರು ಮಗನ ಕಾರು ಅಪಘಾತದ ಕಹಿ ದಿನವನ್ನು ನೆನೆಸಿಕೊಂಡು, ರಾಯರ ಕೃಪೆಯನ್ನು ನೆನೆದು ಮಾತನಾಡಿದರು.

Leave a Comment

error: Content is protected !!