ಕುರಿ ಕಾಯುವ ಕಾಡು ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವುದನ್ನು ಕಂಡು ಪುನೀತ್ ಮತ್ತು ಅಶ್ವಿನಿ ಮಾಡಿದ್ದೇನು??

ಕನ್ನಡ ಚಿತ್ರರಂಗಕ್ಕೆ ಬಾಲ್ಯದಿಂದಲೂ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದ ಪುನೀತ್ ರಾಜಕುಮಾರ್ ಪೌರಾಣಿಕ, ಸಾಹಸ, ಹಾಸ್ಯ, ಪ್ರೇಮ ಕಥೆ ಸೇರಿದಂತೆ ಹಲವಾರು ವಿಧದ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲದೆ ಕಿರುತೆರೆಯ ಪರದೆಯ ಮೇಲು ಇವರ ನಗು ಅಚ್ಚಾಗಿ ಉಳಿದಿದೆ. ಕನ್ನಡದ ಕೋಟ್ಯಾಧಿಪತಿಯನ್ನು ನಡೆಸಿಕೊಡುತ್ತಿದ್ದ ಇವರು ಕೋಟಿ ಕನ್ನಡಿಗರ ಮನ ಗೆದ್ದ ‘ರಾಜಕುಮಾರ’.

‘ದೊಡ್ಮನೆ ಹುಡುಗ’ನಾಗಿದ್ದರೂ ಗುಣವಂತಿಕೆಯಲ್ಲಿ ‘ಅರಸು’. ಇವರು ಎಲ್ಲಾ ವಿಧದ ಪಾತ್ರಗಳನ್ನು ಸಲೀಸಾಗಿ ಅಭಿನಯಿಸಬಲ್ಲ ‘ನಟಸಾರ್ವಭೌಮ’.’ಅಪ್ಪು’ ಎಂದೇ ಖ್ಯಾತಿಯಾದ ಕನ್ನಡ ಚಿತ್ರರಂಗದ ‘ಯುವರತ್ನ’. ಚಿತ್ರರಂಗದ ಪ್ರಯಾಣದಲ್ಲಿ ಅದ್ಭುತ ಕಥೆಗಳಿಗೆ ಬಣ್ಣ ಹಚ್ಚಿದ ‘ರಣವಿಕ್ರಮ’. ‘ನಿನ್ನಿಂದಲೇ’ ನಾನು ಎನ್ನುತ್ತಾ ಪ್ರತಿ ಅಭಿಮಾನಿಗಳಿಗೆ ಪ್ರೋತ್ಸಾಹಿಸುವ ‘ಪವರ್’.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೊಡನೆ ಅವರ ಸರಳತೆ, ಮುಗ್ಧ ನಗು, ನೊಂದವರಿಗೆ ಧೈರ್ಯ ತುಂಬುವ ಪ್ರೋತ್ಸಾಹಕ ನುಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಇವೆಲ್ಲವೂ ಒಮ್ಮೆಲೆ ನೆನಪಾಗುತ್ತವೆ. ಮಗುವಿನ ಮನಸಿರುವ ಇವರು ಎಂದಿಗೂ ಅಹಂಕಾರದಿಂದ ಮೆರೆದವರಲ್ಲ. ಸಾಮಾನ್ಯ ಜನರೊಂದಿಗೆ ಬೆರೆತು ಖುಷಿಯಿಂದ ನಗಿಸುತ್ತಾ, ನಗುತ್ತಾ ಇರುವವರು. ಪುನೀತ್ ರಾಜಕುಮಾರ್ ಅವರು ತೀರಿಕೊಂಡು ವರ್ಷವಾಗುತ್ತಾ ಬಂದರು ಅವರ ನೆನಪುಗಳಿಂದ ಸದಾ ಜೀವಂತ. ಸರಳತೆಗೆ ಉದಾಹರಣೆಯಾದ ಸಣ್ಣ ಸಂದರ್ಭವೊಂದನ್ನು ಮೆಲಕು ಹಾಕೋಣ.

ಸಿನಿಮಾ ಚಿತ್ರೀಕರಣಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಿದ್ದ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಭಾನುವಾರದಂದು ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ದರ್ಶನಕ್ಕೆಂದು ಆಗಮಿಸಿದ್ದರು. ಕೊರೊನ ಭಯದಿಂದಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಪುನೀತ್ ರಾಜಕುಮಾರ್ ಅವರು ಬೇಸರಗೊಳ್ಳದೆ ಅಲ್ಲೇ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿದ್ದರು. ಅದೇ ವೇಳೆಯಲ್ಲಿ ಕುರಿಗಾಹಿಗಳು ಜಮೀನಿನಲ್ಲಿ ಹಾಕಿರುವ ಸಣ್ಣ ಸಣ್ಣ ಹಟ್ಟಿಗಳು ಪುನೀತ್ ಅವರ ಕಣ್ಣಿಗೆ ಬಿದ್ದವು. ಅಲ್ಲಿಗೆ ಭೇಟಿ ನೀಡಿ, ಹಳ್ಳಿಗರೊಂದಿಗೆ ಆಗು ಹೋಗುಗಳ ಬಗ್ಗೆ ಖುಷಿಯಿಂದ ಮಾತನಾಡಿ, ಅಲ್ಲೇ ನಿಂತಿರುವ ಪುಟ್ಟ ಕಂದಮ್ಮನನ್ನು ಎತ್ತಿ ಮುದ್ದಾಡಿದ್ದರು. ಮಕ್ಕಳೊಂದಿಗೆ ಮಕ್ಕಳಂತೆ ಕಾಲ ಕಳೆಯುವ ಇವರು ಕಾರ್ಯಕ್ರಮಗಳಲ್ಲಾಗಲಿ, ಚಿತ್ರೀಕರಣದ ವೇಳೆಯಲ್ಲಾಗಲಿ ಒಮ್ಮೆಯಾದರೂ ಪುಟಾಣಿಗಳ ಕೆನ್ನೆ ಹಿಂಡಿ ಮಾತನಾಡಿಸುತ್ತಿದ್ದರು. ತಾನೊಬ್ಬ ಶ್ರೀಮಂತ, ನಗರದಲ್ಲಿ ವಾಸಿಸುವವನು ಎಂಬ ಭಾವವನ್ನು ಎಂದಿಗೂ ಹೊಂದಿರದ ಪುನೀತ್ ಅವರು ಕುರಿಗಾಹಿಗಳೊಂದಿಗೆ ಕೂತು ಬಾಳೆ ಎಲೆಯಲ್ಲಿ ಬಡಿಸಿದ ಪ್ರೀತಿ ತುಂಬಿದ ಭೋಜನವನ್ನು ಗೌರವದಿಂದಲೇ ಸ್ವೀಕರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೋಡಸಿಗುವ ಈ ವಿಡಿಯೋ ಪುನೀತ್ ರಾಜಕುಮಾರ್ ಅವರ ಹೃದಯವಂತಿಕೆಯನ್ನು ಸಾರುವಂತದ್ದು.

Leave a Comment

error: Content is protected !!